

ಮೈಸೂರು: ಜಗದ್ವಿಖ್ಯಾತ ವಿಜ್ಞಾನಿಗಳು, ವಿವಿಧ ಕ್ಷೇತ್ರಗಳ ವಿದ್ವಾಂಸರು ಸಂಸ್ಕೃತ ಭಾಷೆಯ ಪ್ರೌಢಿಮೆಯನ್ನು ಎತ್ತಿ ಹಿಡಿದಿದ್ದಾರಲ್ಲದೇ ಭಾಷೆ ಜತೆಗೆ ಬೆಸೆದಿರುವ ಅಸಾಮಾನ್ಯ ಜ್ಞಾನವನ್ನು ಕಂಡುಕೊಂಡಿದ್ದಾರೆ ಎಂದು ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತ ಕುಟುಂಬ ಶಿಕ್ಷಣ ಸಂಯೋಜಕ ಪ್ರೊ.ಟಿ.ಎನ್.ಪ್ರಭಾಕರ್ ಹೇಳಿದರು.
ಸಂಸ್ಕೃತ ಭಾರತಿ, ಅಮೃತ ವಿಶ್ವವಿದ್ಯಾಪೀಠಂನ ಸಹಯೋಗದೊಂದಿಗೆ ಬೋಗಾದಿಯ ಅಮೃತ ವಿದ್ಯಾಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಂಸ್ಕೃತ ಸಪ್ತಾಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಶ್ರೀಮಂತ ಸಾಂಸ್ಕೃತಿಕತೆ ಹಾಗೂ ಭಾಷಾ ಪರಂಪರೆಯನ್ನು ಗುರುತಿಸುವ ಹಾಗೂ ಅದನ್ನು ಆಚರಿಸುವ ಉದ್ದೇಶದೊಂದಿಗೆ ಅಮೃತ ವಿಶ್ವವಿದ್ಯಾಪೀಠಂ ಮೈಸೂರಿನಲ್ಲಿ ಸಂಸ್ಕೃತ ಸಪ್ತಾಹ ಆಚರಿಸಲಾಗುತ್ತಿದೆ. ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಭಾರತೀಯತೆಯ ಮೇಲೆ ಸಂಸ್ಕೃತ ಭಾಷೆಯ ಅಗಾಧ ಪ್ರಭಾವವನ್ನು ಜನರ ಅರಿವಿಗೆ ತರುವ ಉದ್ದೇಶ ಇದಾಗಿದೆ ಎಂದರು.
ಭಾರತದ ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಂಸ್ಕೃತದ ಕೊಡುಗೆಗಳು ಅವಿಸ್ಮರಣೀಯ ಇಂತಹ ಕೊಡುಗೆಯಿಂದಾಗಿಯೇ ಭಾರತವು ಸಂಸ್ಕೃತಿಯ ತೊಟ್ಟಿಲಾಗಿದೆ. ಜಾಗತಿಕ ಮಟ್ಟದಲ್ಲಿ ಸಂಸ್ಕೃತ ಭಾಷೆ ಮನ್ನಣೆ ಪಡೆದುಕೊಂಡು ಹಲವರು ಜ್ಞಾನ ಕಂಡುಕೊಂಡಿದ್ದಾರೆ. ಇದು ಭಾರತೀಯರೂ ಅತ್ಯಂತ ಹೆಮ್ಮೆಪಡುವ ವಿಷಯ ಎಂದು ಹೇಳಿದರು.
ಜಗತ್ತಿನ ಮೊದಲ ಜ್ಞಾನದ ಬೇರು ಮೊಳಕೆಯೊಡೆದಿದ್ದು, ಸಾಹಿತ್ಯ ಕೃತಿಗಳು ಬರೆಯಲ್ಪಟ್ಟಿದ್ದು ಭಾರತದ ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತವು ಕೇವಲ ಭಾಷೆಯಲ್ಲ, ಅದು ಜ್ಞಾನದ ಹೆಮ್ಮರವಾಗಿದ್ದು ಇಂದಿನ ಯುವ ಪೀಳಿಗೆ ಈ ಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಪ್ರೊ. ಶೇಖರ್‌ಬಾಬು, ಪ್ರಾಂಶುಪಾಲ ಡಾ. ಜಿ.ರವೀಂದ್ರನಾಥ್, ಸಹಾಯಕ ಪ್ರಾಧ್ಯಾಪಕ ಡಾ. ವಿಘ್ನೇಶ್ವರ್ ಭಟ್ ಇದ್ದರು.
ಸಪ್ತಾಹದ ಭಾಗವಾಗಿ ಸರಣಿ ಉಪನ್ಯಾಸಗಳು ಸೆ. 7ರವರೆಗೆ ಲಕ್ಷ್ಮೀಪುರಂನಲ್ಲಿರುವ ಗೋಪಾಲಸ್ವಾಮಿ ಶಿಶು ವಿಹಾರ ಶಾಲೆಯಲ್ಲಿ ಸಂಜೆ 5.30 ರಿಂದ 7ರವರೆಗೆ ನಡೆಯಲಿವೆ.