ಭಾರತೀಯ ಸೇನೆಯ ಕಾರ್ಯಾಚರಣೆಗೆ ಸಂಭ್ರಮ

ctd nnn
Published on

ಚಿತ್ರದುರ್ಗ: ಪಹಲ್ಗಾಮ್‌ನಲ್ಲಿ ಉಗ್ರರು ಹಿಂದುಗಳ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದೊಳಗೆ ನುಗ್ಗಿ 9 ಭಯೋತ್ಪಾದಕ ತಾಣಗಳು ಹಾಗೂ ನೂ ರಾರು ಭಯೋತ್ಪಾದಕರನ್ನು ಹೊಡೆದುರುಳಿದ ಭಾರತೀಯ ಸೇನೆಯ‘ಆಪರೇಷನ್ ಸಿಂಧೂರ’ ಕಾರ್ಯಚರಣೆಯನ್ನು ನಗರದಲ್ಲಿ ಬುಧವಾರ ನಾಗರಿಕರು, ರಾಷ್ಟ್ರೀಯವಾದಿಗಳು, ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಿಸಿದರು.

ನಗರದ ವೀರ ವನಿತೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಹೆಮ್ಮೆಯ ನಮ್ಮ ಸೈನಿಕರು ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರರನ್ನು ಸರ್ವನಾಶ ಮಾಡಿದ ದಿನ ಬೃಹತ್ ವಿಜಯೋಯತ್ಸವ ದಿನವಾಗಲಿದೆ. ನಮ್ಮ ಹೆಮ್ಮೆಯ ಸೈನಿಕರಿಗೆ ಮನೋಬಲ ತುಂಬಲು ಈ ಸಂಭ್ರಮ ಆಚರಿಸಲಾಗುತ್ತಿದೆ ಎಂದು ಜಿತೇಂದ್ರ ಹುಲಿಕುಂಟೆ ಮತ್ತಿತರರು ಹೇಳಿದರು.

ಉಗ್ರರು ಧರ್ಮವನ್ನು ಕೇಳಿ, ಕೇಳಿ ಹತ್ಯೆ ಮಾಡಿದ್ದಾರೆ. ನಮ್ಮ ತಾಯಿಂದರ ಕುಂಕುಮವನ್ನು ಅಳಿಸಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಈ ಆಪರೇಷನ್‌ಗೆ ಸಿಂಧೂರ ಎಂದು ಕರೆದು ದೇಶದ ಸೈನಿಕರ ದಿಟ್ಟ ನಡೆಯನ್ನು ಪ್ರಪಂಚದ ಎದುರು ಅನಾವರಣಗೊಳಿಸಿದ್ದಾರೆ. ಭಯೋತ್ಪಾದಕ ಕೃತ್ಯಗಳನ್ನು ಸಹಿಸುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ ಎಂದರು.

ಭಾರತ ಮಾತೆಯ ಸಿಂಧೂರ ಜಮ್ಮು-ಕಾಶ್ಮೀರವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಪಹಲ್ಗಾಮ್ ದಾಳಿ ವಿರುದ್ಧ ಪ್ರತಿಕಾರದ ಭೂಮಿ ಪೂಜೆ ಬುಧವಾರ ನಡೆದಿದೆ. ಇನ್ನೂ ಬಹಳಷ್ಟು ಪಾಠವನ್ನು ಪಾಕಿಸ್ತಾನಕ್ಕೆ ಕಲಿಸುವುದು ಬಾಕಿ ಇದೆ. ನಮ್ಮಲ್ಲಿರುವ ದೇಶ ದ್ರೋಹಿಗಳಿಗೂ ತಕ್ಕ ಪಾಠ ಕಲಿಸಬೇಕಿದೆ ಎಂದರು.

ವೆಂಕಟೇಶ್‌ಯಾದವ್, ಎನ್.ಡಿ. ಕುಮಾರ್, ಛಲವಾದಿ ತಿಪ್ಪೇಸ್ವಾಮಿ, ಎ.ವಿ. ಮಂಜುನಾಥ್, ಗುರುಮೂರ್ತಿ, ವಿಜಯ್, ರುದ್ರೇಶ್, ನಾಗರಾಜ್ ಸಗಂ, ಆದರ್ಶ, ಅಭಿಲಾಶ್, ಯೋಗೇಶ್ ಇತರರು ಇದ್ದರು.

ಭಯೋತ್ಪಾದಕರನ್ನು ಬಗ್ಗು ಬಡೆಯಲಿ

ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ನಡೆಸಿದ ಕೃತ್ಯವನ್ನು ಖಂಡಿಸಿರುವ ಎದ್ದೇಳು ಕರ್ನಾಟಕ ಸಂಘಟನೆ, ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಅವರನ್ನು ಪತ್ತೆ ಹಚ್ಚಿ ಬಗ್ಗು ಬಡಿಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬುಧವಾರ ನಗರದಲ್ಲಿ ನಡೆದ ಸಂಘಟನೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಕಮಿಟಿ ಸದಸ್ಯ ಜೆ. ಯಾದವರೆಡ್ಡಿ, ಭಯೋತ್ಪಾದಕರಲ್ಲಿ ಕೊಲ್ಲುವ ಮನಸ್ಥಿತಿ ಬಿಟ್ಟರೆ ಮಾನವೀಯತೆ ಇರುವುದಿಲ್ಲ. ಭಾರತದಲ್ಲಿ ಹಿಂದು-ಮುಸಲ್ಮಾನರು ಸಹೋದರರಂತೆ ಏಕತೆಯಿಂದ ಇದ್ದಾರೆ ಎಂದರು. ಶಿವಕುಮಾರ್, ಟಿ. ಶಫಿವುಲ್ಲಾ, ಪ್ರಜಾಶಕ್ತಿ ಬೋರಯ್ಯ, ಪುರುಷೋತ್ತಮ, ಬೀಬಿಜಾನ್, ಎಸ್.ಟಿ. ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ನುಡಿದಂತೆ ನಡೆದ ಮೋದಿ

ಪಾಕಿಸ್ತಾನದ ಉಗ್ರಗಾಮಿಗಳು ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಧರ್ಮವನ್ನು ಕೇಳಿ, ಕೇಳಿ 26 ಜನರನ್ನು ಅಮಾನುಷವಾಗಿ ಹತ್ಯೆಗೈದಿದ್ದರ ಪ್ರತಿಯಾಗಿ ಭಾರತ ಬುಧವಾರ ಪಾಕಿಸ್ತಾನದಲ್ಲಿರುವ 9 ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿ ನಡೆಸಿದ ಆಪರೇ ಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಂಎಲ್‌ಸಿ ಕೆ.ಎಸ್. ನವೀನ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಚರಣೆ ಮೂಲಕ ನಮ್ಮ ಹೆಮ್ಮೆಯ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೆಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದಿದ್ದಾರೆ ಎಂದು ನವೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜನಾಕ್ರೋಶ ಯಾತ್ರೆ ಮತ್ತೆ ಮುಂದೂಡಿಕೆ

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ನಗರದಲ್ಲಿ ಮೇ 8ರಂದು ಹಮ್ಮಿಕೊಂಡಿದ್ದ ಜನಾಕ್ರೋಶಯಾತ್ರೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ಸುರೇಶ್ ಸಿದ್ದಾಪುರ ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ, ಹಿಂದುಗಳ ಹತ್ಯೆಗೈದಿದ್ದರ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ‘ಆಪರೇಷನ್ ಸಿಂಧೂರ ಕಾರ‌್ಯಾಚರಣೆ’ ನಿಮಿತ್ತ ಜನಾಕ್ರೋಶ ಯಾತ್ರೆಯನ್ನು ಮುಂದೂಡಲಾಗಿದೆ. ಚಿತ್ರದುರ್ಗದಲ್ಲಿ ಈ ಮುನ್ನ ಏ.25ರಂದು ಜನಾಕ್ರೋಶಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಹಲ್ಗಾಮ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು, ಈಗ ಮತ್ತೆ ಮುಂದೂಡಲಾಗಿದೆ. ಯಾತ್ರೆ ನಡೆಯುವ ದಿನಾಂಕ ನಂತರ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net