

ಗುಂಡ್ಲುಪೇಟೆ : ಪಹಲ್ಗಾಮ್ ನರಮೇಧ ನಡೆಸಿದ್ದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ನಡೆಸಿದ್ದ ಭಾರತದ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಪಟ್ಟಣದಲ್ಲಿ ಶುಕ್ರವಾರ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ನಾನಾ ಸಂಘಟನೆಗಳ ವತಿಯಿಂದ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪಡಗೂರು ಮಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮೂಡಗೂರು ಮಠಾಧ್ಯಕ್ಷ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಬೊಮ್ಮನಹಳ್ಳಿ ಮಠಾಧ್ಯಕ್ಷ ಶ್ರೀ ಇಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಕಬ್ಬಹಳ್ಳಿ ಮಠಾಧ್ಯಕ್ಷ ಶ್ರೀ ಗುರುಸಿದ್ದಸ್ವಾಮೀಜಿ ಚಾಲನೆ ನೀಡಿದರು.
ಸರ್ಕಾರಿ ಐಟಿಐ ಕಾಲೇಜು, ಜೆಎಸ್‌ಎಸ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕ, ಕನ್ನಡ ಹಾಗೂ ರೈತ ಸಂಘಟನೆಗಳ ನೂರಾರು ಸದಸ್ಯರು 150 ಅಡಿ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಭಾರತೀಯ ಸೈನಿಕರ ಪರವಾಗಿ ಜಯಘೋಷ ಕೂಗಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಿವಾನಂದ ವೃತ್ತದವರೆಗೆ ಸಾಗಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ರೈತ ಮುಖಂಡರಾದ ಮಹದೇವಪ್ಪ, ಸಂಪತ್ತು, ಮಹೇಶ್, ಕೆ.ಎಲ್.ಮಹದೇವಸ್ವಾಮಿ, ಶಿವಪ್ರಸಾದ್, ಮಂಚಳ್ಳಿ ಬಾಬು, ಶಿವಪ್ರಸಾದ್, ಮಂಜುನಾಥ್, ಎಸ್.ಟಿ.ಮಹದೇವಸ್ವಾಮಿ, ವೀರಪ್ಪ, ಪುರಸಭೆ ಮಾಜಿ ಸದಸ್ಯೆ ಮಂಗಳಾ ಮಂಜುನಾಥ್, ರಾಜೇಂದ್ರ, ಅಬ್ದುಲ್ ಮಾಲೀಕ್, ಮುನೀರ್ ಪಾಷ ಸೇರಿದಂತೆ ಹಲವರು ಇದ್ದರು.