

ಕೂಡ್ಲಿಗಿ: ಉಗ್ರರ ಉಪಟಳಕ್ಕೆ ಭಾರತೀಯ ಸೈನಿಕರು ದಿಟ್ಟ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಭಾರತೀಯ ಸೇನೆ ವಿಶ್ವದಲ್ಲೇ ಅತ್ಯಂತ ಪ್ರಬಲವಾಗಿದೆ. ಇದರಿಂದಾಗಿ ಶತ್ರು ರಾಷ್ಟ್ರಗಳಿಗೆ ಆತಂಕವಾಗಿದೆ. ಉಗ್ರರ ತಾಣವಾದ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಬಗ್ಗುಬಡಿದ ಭಾರತೀಯ ಸೇನೆ ಅತ್ಯಂತ ಯಶಸ್ವಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ದೇಶದ ಸೇನಾ ಸಾಮರ್ಥ್ಯವನ್ನು ಪ್ರಪಂಚಕ್ಕೆ ಪರಿಚಯಿಸಿದೆ ಎಂದರು.
ಪಟ್ಟಣದ ಯೋಧ ಕುಂಬಾರ ಮಂಜುನಾಥ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಸೇನೆಗೆ ಸಂಪೂರ್ಣ ಅಧಿಕಾರ ನೀಡಿತ್ತು. ಭಾರತೀಯ ಸೇನೆ ಅತ್ಯಂತ ಶಿಸ್ತುಬದ್ಧವಾಗಿ ಉಗ್ರರ ವಿರುದ್ಧ ಕಾಯಾರ್ರ್ಚರಣೆ ನಡೆಸಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತು. ಆದರೆ ಪಾಕ್ ಉಗ್ರರ ರಕ್ಷಣೆಗೆ ಮುಂದಾದ ಪಾಕಿಸ್ತಾನ ಭಾರತೀಯರನ್ನು ಗುರಿಯಾಗಿಸಿ ದಾಳಿ ಮಾಡಲು ಮುಂದಾಯಿತು.ನಮ್ಮ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮುಂದೆ ಪಾಕಿಸ್ತಾನದ ಆಟ ನಡೆಯಲಿಲ್ಲ. ಸೋಲು ಖಚಿತವಾಗುವುದನ್ನು ತಿಳಿದ ಕಪಟಿ ಪಾಕಿಸ್ತಾನ ಕದನ ವಿರಾಮಕ್ಕೆ ಅಂಗಲಾಚಿ ಹೇಡಿತನವನ್ನು ಮತ್ತೊಮ್ಮೆ ವಿಶ್ವದ ಎದುರು ಸಾಬೀತು ಮಾಡಿತು ಎಂದು ತಿಳಿಸಿದರು.
200 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಪಟ್ಟಣದ ಹುತಾತ್ಮರ ಸ್ಮಾರಕದಿಂದ ವಿವಿಧ ವೃತ್ತಗಳ ಮೂಲಕ ತಿರಂಗಾ ಯಾತ್ರೆ ನಡೆಯಿತು. ಪ್ರಮುಖರಾದ ಎಸ್.ದುರುಗೇಶ್, ರೇಖಾ ಮಲ್ಲಿಕಾರ್ಜುನ, ಗೀತಾ, ವಿಜಯಲಕ್ಷ್ಮೀ, ಬಾಲಪ್ಪ, ರಾಮು ಕಾಟ್ವಾ, ಸಾಣೆಹಳ್ಳಿ ಹನುಮಂತಪ್ಪ, ಲಕ್ಷ್ಮೀದೇವಿ, ಭರತ್, ಬಿ.ಇಡಿ ವಿದ್ಯಾರ್ಥಿಗಳು ಇದ್ದರು.