ಭಾರತೀಯ ಸಾಹಿತ್ಯಕ್ಕೆ ಪಾಶ್ಚಾತ್ಯರ ಸೇವೆ ಗಣನೀಯ

18 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ 300 ವರ್ಷಗಳ ಕಾಲದಲ್ಲಿ ನಮ್ಮ ಸಾಹಿತ್ಯ ಸಂಸ್ಕೃತಿಗಳೆಲ್ಲವನ್ನು ಕಾಲಗರ್ಭದಿಂದ ಅಗೆದು ತಂದ ಪಾಶ್ಚಾತ್ಯ ವಿದ್ವಾಂಸರ ತಂಡ, ಈ ದೇಶದಲ್ಲಿ ಆಧುನಿಕ ಋಷಿಗಳಂತೆ ಕಂಡು ಬಂದರು. ಈ ಸಾಹಸಮಯ ಕೆಲಸ ಇಡೀ ಪ್ರಪಂಚದ ಚರಿತ್ರೆಯಲ್ಲೇ ಮತ್ತೆಲ್ಲೂ ನಡೆಯದ ಅಪರೂಪದ ಘಟನೆಯಾಗಿದೆ ಎಂದು ಇಂಡೋ ಪೋರ್ಚುಗೀಜ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಅಭಿಪ್ರಾಯಪಟ್ಟರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟ ವತಿಯಿಂದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾರತೀಯ ಸಾಹಿತ್ಯ, ಸಂಸ್ಕೃತಿಗಳಿಗೆ ಪಾಶ್ಚಿಮಾತ್ಯ ವಿದ್ವಾಂಸರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
18ನೇ ಶತಮಾನದ ಪೂರ್ವಾರ್ಧದಿಂದ ಮುಂದಿನ 200 ವರ್ಷಗಳ ಕಾಲದಲ್ಲಿ ಉಂಟಾದ ಉತ್ಕ್ರಾಂತಿಯು ದೇಶದ ಸಹಸ್ರಾರು ವರ್ಷಗಳ ಚಿರಿತ್ರೆಯಲ್ಲಿ ಎಂದೂ ಕಂಡುಬಾರದಿದ್ದ ವಿಶಿಷ್ಟ ಘಟನೆಯಾಗಿದೆ. ಪಾಶ್ಚಾತ್ಯರ ಬರುವಿಕೆಯು ಈ ದೇಶವನ್ನು ಆಧುನಿಕ ಜಗತ್ತಿನ ಬಾಗಿಲಿಗೆ ತಂದು ನಿಲ್ಲಿಸಿದೆ ಎಂಬುದು ನಿರ್ವಿವಾದ ವಿಚಾರ. 18ನೇ ಶತಮಾನ ವರೆಗೂ ನಮ್ಮ ಜನರ ಜ್ಞಾನದ ಪರಿಮಿತಿ, ಜೀವನ ವ್ಯವಹಾರ, ಅಮಾನುಷ ನೀತಿ ಮತ್ತು ಶುಷ್ಕ ಪರಂಪರೆ ಮೊದಲಾದವುಗಳನ್ನು ಪಾಶ್ಚಾತ್ಯ ವಾಙ್ಮಯವು ಕಟ್ಟಿಹಾಕಿ ದೇಶಕ್ಕೆ ಹೊಸ ವಾತಾವರಣ ಕಲ್ಪಿಸಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟ ಮಾತನಾಡಿ, ಪಾಶ್ಚಾತ್ಯರ ಧರ್ಮಪ್ರಸಾರ, ಮತಾಂತರ, ವ್ಯಾಪಾರಗಳೆಲ್ಲವೂ ಆಕ್ಷೇಪಾರ್ಹ ಸಂಗತಿಗಳಾದರೂ, ಪಾಶ್ಚಾತ್ಯರ ಇತಿಹಾಸ ನೋಡಿದಾಗ ಅಪೂರ್ವ ಜ್ಞಾನ ಭಂಡಾರವುಳ್ಳ ಸಂಸ್ಕೃತವನ್ನು ಜಾಗತಿಕ ಮಟ್ಟದಲ್ಲಿ ಉಳಿಸಿದವರು ಪಾಶ್ಚಿಮಾತ್ಯರು ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ ಎಂದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ. ಹ.ವೆಂ. ಕಾಖಂಡಿಕಿ, ಡಾ. ಶಿವಾನಂದ ಶೆಟ್ಟರ್, ಪ್ರೊ. ದುಷ್ಯಂತ ನಾಡಗೌಡ, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಆನಂದ ಪಾಟೀಲ, ಪ್ರಕಾಶ ಗರುಡ, ರಾಘವ ಕಮ್ಮಾರ, ಎಂ.ಜಿ. ಸಿಂದಗಿ, ಜಯದೇವ ಚಂದನಗೌಡರ, ಎಸ್.ಜಿ. ಹಿರೇಮಠ, ಎಸ್.ಎಸ್. ಬಂಗಾರಿಮಠ, ಎಂ.ವಿ. ಹೊಸಮನಿ, ಬಿ.ಜಿ. ಗುಂಡೂರ, ಎಸ್.ಎಂ. ದೇಶಪಾಂಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net