

ಕೆ.ಆರ್.ಪೇಟೆ: ನೀವೂ ಬದುಕಿ ಮತ್ತು ಬೇರೆಯವರನ್ನು ಬದುಕಲಿ ಬಿಡುವುದು ನಿಜವಾದ ಮಾನವ ಧರ್ಮ ಎಂದು ಶ್ರೀರಂಗಪ್ಪಟಣದ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ತಾಲೂಕು ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತಂದೆ ತಾಯಿ, ಮಡದಿ, ಮಕ್ಕಳ ಮೋಹದ ಬಲೆಯಿಂದ ನಾವೆಲ್ಲರೂ ಹೊರಬರಬೇಕು. ಜಗತ್ತಿನಲ್ಲಿ ನನ್ನದು ಎನ್ನುವುದು ಯಾವುದೂ ಇಲ್ಲ. ಪ್ರತಿಯೊಬ್ಬರು ಸಿಕ್ಕ ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯಾರು ಸಂನ್ಯಾಸ ದೀಕ್ಷೆ ಪಡೆಯುತ್ತಾರೋ ಅವರೆಲ್ಲರೂ ಧರ್ಮದ ಮಕ್ಕಳು. ಸಂನ್ಯಾಸಿಗಳಿಗೆ ಜಾತಿ ಮತ, ಪಂಥದ ಚೌಕಟ್ಟಿಲ್ಲ. ಎಲ್ಲರನ್ನು ಪ್ರೀತಿಸಿ ಹರಸುವುದಷ್ಟೇ ನಮ್ಮ ಕೆಲಸ. ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಸರ್ವಶ್ರೇಷ್ಠವಾದುದು. ಎಲ್ಲರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಏಕೈಕ ಧರ್ಮ ನಮ್ಮದು ಎಂದು ಹೇಳಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಹೊರತುಪಡಿಸಿದರೆ ಜೆಡಿಎಸ್ ಶಾಸಕರಿಲ್ಲ ಎನ್ನುವ ಬೇಸರ ನನಗಿಲ್ಲ. ನಾನು ರೈತ ಚಳವಳಿಯ ಮೂಲಕ ಬಂದವನು. ಹೋರಾಟದ ಮೂಲಕವೇ ಶಾಸಕನಾಗಿದ್ದೇನೆ. ಆಡಳಿತ ಪಕ್ಷದಲ್ಲಿ ನಿಂತು ಕೆಲಸ ಮಾಡುವುದಕ್ಕಿಂತಲೂ ಪ್ರತಿಪಕ್ಷದಲ್ಲಿ ನಿಂತು ಕೆಲಸ ಮಾಡುವುದರಿಂದ ಹೆಚ್ಚು ಖುಷಿ ಸಿಗಲಿದೆ. ಸಾರ್ವಜನಿಕ ಜೀವನದಲ್ಲಿ ಟೀಕೆ ಸಹಜ. ನನ್ನ ವಿರುದ್ಧದ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಸಂಘರ್ಷದ ರಾಜಕಾರಣಕ್ಕೆ ಹೋಗುವುದಿಲ್ಲ. ತುಳಿತಕ್ಕೆ ಒಳಗಾದ ಜನರಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಗವೀಮಠದ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಸಮಾಜದ ಮುಖಂಡರು ಇದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.