

ಬಸವಕಲ್ಯಾಣ: ಕಲಬುರಗಿ ಜಿಲ್ಲೆ ಸೇಡಂನಲ್ಲಿ 2025ರ ಜನವರಿಯಲ್ಲಿ ಆಯೋಜಿಸಿರುವ ಐತಿಹಾಸಿಕ 7ನೇ ಭಾರತೀಯ ಸಂಸ್ಕøತಿ ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಸೇಡಂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ನಗರದ ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ಚೌಕ್ ವಿಕಾಸಪಥ ಯಾತ್ರೆ ನಂತರ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಶರಣರ ವಚನಗಳು ಸತ್ಸಂಗದ ದಾರಿದೀಪಗಳಾಗಿವೆ. ಧರ್ಮ, ಸಂಸ್ಕøತಿಗೆ ದೊಡ್ಡ ಕೊಡುಗೆ ನೀಡಿರುವ ಕಲ್ಯಾಣ ನಾಡಿನ ಶರಣರು ತೋರಿದ ದಾರಿಯಲ್ಲಿ ಸಾಗುವ ಮೂಲಕ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಮುಚಳಂಬದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಖೇಳಗಿ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಬೇಲೂರಿನ ಶ್ರೀ ಪಂಚಾಕ್ಷರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಉಪಸ್ಥಿತರಿದ್ದರು. ವಿಕಾಶ ಅಕಾಡೆಮೆ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಬಿರಾದಾರ ಸ್ವಾಗತಿಸಿದರು. ಗುರು ದೇಗಾಂವ ನಿರೂಪಣೆ ಮಾಡಿದರು. ಲೋಕೇಶ ಮೊಳಕೇರೆ ವಂದಿಸಿದರು.