ಭಾರತೀಯ ಸಂವಿಧಾನ ಓದಿ ಅರ್ಥೈಸಿಕೊಳ್ಳಿ

26 gkp 02
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಹಸೀಲ್ದಾರ್ ಎನ್. ಎಸ್. ಪ್ರಶಾಂತ್ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
Published on

ಗೋಣಿಕೊಪ್ಪ: ವಿಶ್ವದ ದೊಡ್ಡ ಲಿಖಿತ ಸಂವಿಧಾನವಾಗಿರುವ ಭಾರತ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅನ್ಯಾಯದಿಂದ ಹೊರಬರಲು ಸಾಧ್ಯವಿದೆ ಎಂದು ಪೊನ್ನಂಪೇಟೆ ತಹಸೀಲ್ದಾರ್ ಎನ್.ಎಸ್.ಪ್ರಶಾಂತ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪೊನ್ನಂಪೇಟೆ ತಾಲೂಕು ಆಡಳಿತ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಸತ್ಯ, ನ್ಯಾಯ ಪರ ಶಿಕ್ಷಣ ಅಗತ್ಯವಾಗಿದ್ದು, ಪ್ರಜೆಯು ತಮ್ಮ ಹಕ್ಕುಗಳನ್ನು ಭಯವಿಲ್ಲದೆ, ಮುಕ್ತವಾಗಿ ಚಲಾಯಿಸಿ ಸೌಲಭ್ಯ ಪಡೆಯುವಂತಾಗಬೇಕಿದೆ. ಇದಕ್ಕೆ ನಮ್ಮ ಸಂವಿಧಾನದಲ್ಲಿರುವ ಕಾನೂನು ಪಾಲನೆ ಮುಖ್ಯ ಎಂದರು.

ಭಾರತೀಯರು ಸ್ವಾಭಿಮಾನದಿಂದ ಹೆಜ್ಜೆ ಇಡಲು ಅನುವು ಮಾಡಿಕೊಟ್ಟ ದಿನವಾಗಿದ್ದು, ಸರ್ಕಾರಿ ದಿನಾಚರಣೆ ರಜಾ ದಿನ ಎಂಬ ಭಾವನೆಯಿಂದ ಹೊರ ಬರಬೇಕಿದೆ. ಭಾರತೀಯ ಪ್ರಜೆಗೆ ಸಮಾನವಾಗಿ ನೀಡಿರುವ ವೈಯಕ್ತಿಕ ಹಕ್ಕುಗಳನ್ನು ಚಲಾಯಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಸಂವಿಧಾನಕ್ಕೆ ಧಕ್ಕೆಯಾಗದಂತೆ ದೇಶದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು, ಸಂವಿಧಾನ ಬದ್ಧ ಸಾಮಾಜಿಕ ಬದುಕು ನಮ್ಮದಾಗಬೇಕಿದೆ ಎಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಮತ್ತು ಗಣರಾಜ್ಯೋತ್ಸವ ಸಂದೇಶ ಸಾರಲಾಯಿತು. ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ವಿರಾಜಪೇಟೆ ತಾ ಪಂ. ಇಒ ಕೊಣಿಯಂಡ ಸಿ.ಅಪ್ಪಣ್ಣ, ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಲೆ.ಎಂ.ಆರ್.ಅಕ್ರಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net