

ಬೈಲಹೊಂಗಲ, ಬೆಳಗಾವಿ: ಆಯುರ್ವೇದ ಪದ್ಧತಿ ಬಳಕೆಯೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಶ್ರೀ ಎಸ್.ಜಿ.ವಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷ ಬಾಗಡೆ ಹೇಳಿದರು.
ಪಟ್ಟಣದ ಶ್ರೀ ಎಸ್.ಜಿ.ವಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚಾರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಜನರಲ್ಲಿ ಆಯುರ್ವೇದ ಬಗ್ಗೆ ಜಾಗೃತಿ ಜಾಥಾ ಹಾಗೂ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ವೈದ್ಯ ಪದ್ಧತಿಗೆ ಇದೀಗ ವಿಶ್ವದೆಲ್ಲೆಡೆ ಮನ್ನಣೆ ಸಿಗುತ್ತಿದೆ. ಋಷಿಮುನಿಗಳ ಕಾಲದಿಂದಲೂ ಆಯುರ್ವೇದ ಚಿಕಿತ್ಸೆ ಬಳಕೆಯಲ್ಲಿದ್ದು, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.
ಜಾಥಾದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಆಯುರ್ವೇದ ಕುರಿತು ಭಿತ್ತಿಪತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನಸಿಕ ಒತ್ತಡ, ನಿರ್ವಹಣೆ ಕುರಿತು ಬೀದಿ ನಾಟಕ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ಚನ್ನಮ್ಮ ವೃತ್ತ, ಬಸವೇಶ್ವರ ಉದ್ಯಾನವನದ ಸ್ವಚ್ಛತೆ ಕೈಗೊಳ್ಳಲಾಯಿತು. 140ಕ್ಕೂ ಹೆಚ್ಚು ಲಾನುಭವಿಗಳು ಉಚಿತ ಆರೋಗ್ಯ ತಪಾಸಣೆ ಶಿಬಿರದ ಲಾಭ ಪಡೆದರು.
ಡಾ. ಸ್ಮಿತಾರಾಜೆ ವಡೇರ, ಡಾ.ಸರೋಜಿನಿ ಬ್ಯಾಡಗಿ, ಡಾ.ಶ್ರೀನಿವಾಸ ಕಾಂಬಳೆ, ಡಾ.ಸಚಿನ ಝಾಡಬುಕೆ, ಡಾ.ಜಿ.ಕೆ.ಶ್ರೀನಿವಾಸ, ಡಾ.ವಿ.ಸಿ.ನಾಯಿಕ, ಡಾ.ಪ್ರಶಾಂತ ಭಂಡಿ, ಡಾ.ಜಗದೀಶ ಅರಳೀಕಟ್ಟಿ, ಡಾ.ನರೇಂದ್ರ ಗುರವ, ಡಾ.ಬಸನಾಯ್ಕ ರುದ್ರನಾಯ್ಕರ, ಡಾ. ನಾಗರಾಜ ಕಂಬಾರ, ಡಾ.ದುರ್ಗಪ್ಪ ಸಾವಂತ್ರಿ, ಡಾ.ಮಂಜುಳಾ ತುರಮರಿ, ಡಾ.ಸುಷ್ಮಾ ಮಾರಿಹಾಳ, ಡಾ. ಶರತ್‌ಕುಮಾರ, ಡಾ. ಕೃಷ್ಣಾಜಿ ಇತರರಿದ್ದರು.