ಭಾರತೀಯ ರೈತ ಒಕ್ಕೂಟದ ನಡೆಗೆ ಅಸಮಾಧಾನ

c----
Published on

ಚಿತ್ರದುರ್ಗ: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವುದನ್ನು ವಿರೋಧಿಸಿರುವ ಭಾರತೀಯ ರೈತ ಒಕ್ಕೂಟದ ದಾವಣಗೆರೆ ಪದಾಧಿಕಾರಿಗಳ ನಡೆಯನ್ನು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರಾಜಕೀಯ ಹೇಳಿಕೆಗಳ ಮೂಲಕ ರೈತರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.

ಭದ್ರಾದಿಂದ ನಮ್ಮ ಪಾಲಿನ ನೀರು ಪಡೆಯಲು ಯಾರ ಅಪ್ಪಣೆ ಬೇಕಿಲ್ಲ. ಭದ್ರಾ ಮತ್ತು ತುಂಗಾ ಜಲಾಶಗಳಿಂದ ಬಯಲು ಸೀಮೆ ಪ್ರದೇಶಗಳಿಗೆ 29.90 ಟಿಎಂಸಿ ನೀರು ಹಂಚಿಕೆಯಾಗಿ ಎರಡು ದಶಕಗಳಾಗಿವೆ. 17.4 ಟಿಎಂಸಿ ತುಂಗಾದಿಂದ, 12.5 ಟಿಎಂಸಿ ಭದ್ರಾದಿಂದ ಪಾಲಾಗಿ ದೆ. ಭದ್ರಾ ಮೇಲ್ದಂಡೆ ಕಾಮಗಾರಿ ಶೇ.50 ಪೂರ್ಣಗೊಂಡಿದೆ. ಇಂಥ ಸಂದರ್ಭದಲ್ಲಿ ಕ್ಯಾತೆ ತೆಗೆಯುವುದು ಒಳ್ಳೆಯದಲ್ಲ ಎಂದರು.

ಭದ್ರಾ ಮೇಲ್ದಂಡೆಯಡಿ ಜಗಳೂರಿಗೂ ನೀರು ಪೂರೈಕೆಯಾಗುತ್ತಿದೆ. ದಾವಣಗೆರೆ ರೈತರು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಚಿತ್ರದುರ್ಗ ರೈತರ ಹೋರಾಟಕ್ಕೆ ದನಿ ಗೂಡಿಸಬೇಕೇ ವಿನಃ ಅಪಸ್ವರ ಎತ್ತಬಾರದು. ಯೋಜನೆಯಡಿ ಲಭ್ಯವಾಗುವ ನೀರನ್ನು ಕೆರೆಗಳನ್ನು ತುಂಬಿಸಲು ಹಾಗೂ ಮೈಕ್ರೋ ಇರಿಗೇಷನ್‌ಗೆ ಬಳಸಲಾಗುತ್ತದೆ. ಮೈಕ್ರೋಇರಿಗೇಶನ್‌ಗೆ 21.90 ಟಿಎಂಸಿ, 367 ಕೆರೆಗಳನ್ನು ತುಂಬಿಸಲು 6 ಟಿಎಂಸಿ ಹಾಗೂ ವಾಣಿವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ಮೀಸಲಿಡಲಾಗಿದೆ.

ಭತ್ತ ಬೆಳೆಯಲು ಜಮೀನುಗಳಲ್ಲಿ ಮನಸೋ ಇಚ್ಚೆ ನೀರು ನಿಲುಗಡೆ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕುಡಿಯಲು ಶುದ್ಧ ನೀರು ದೊರಕುವ ವಾತಾವರಣ ಸೃಷ್ಟಿಯಾಗಲಿದೆ. ವಿವಿ ಸಾಗರ ಜಲಾಶಯದಿಂದ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕಿನ ಸೈನ್ಸ್ ಸಿಟಿಗೂ ನೀರು ಒಯ್ಯಲಾಗಿದೆ ಎಂದರು.

ಮುಖಂಡ ಪ್ರೊ.ಜೆ. ಯಾದವರೆಡ್ಡಿ ಮಾತನಾಡಿ, ದಾವಣಗೆರೆಯಲ್ಲಿ ಅಚ್ಚುಕಟ್ಟ ಪ್ರದೇಶ ವಿಸ್ತರಣೆಯಾಗಿದೆ. ನೀರು ಬಳಕೆ ಕೂಡ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ತ್ವರಿತಕ್ಕೆ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಐದು ಸಾವಿರ ಕೋಟಿ ರೂ. ಕಾಯ್ದಿರಿಸಬೇಕು ಎಂದು ಆಗ್ರಹಿಸಿ ಸಿಎಂಗೆ ಹಿರಿಯೂರಲ್ಲಿ ಮನವಿ ಸಲ್ಲಿಸಲಾಗುವುದು ಎಂದರು.

ಮುಖಂಡ ಕೆ.ಸಿ. ಹೊರಕೇರಪ್ಪ ಮಾತನಾಡಿ, ನೀರು ರಾಷ್ಟೀಯ ಸ್ವತ್ತು ಎಂಬುದನ್ನು ಅರಿಯ ಬೇಕಿದೆ ಎಂದರು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಹಂಪಯ್ಯನ ಮಾಳಿಗೆ ಧನಂಜಯ, ಆರ್.ಬಿ.ನಿಜಲಿಂಗಪ್ಪ, ಕಬ್ಬಿಗೆರೆ ನಾಗರಾಜ್, ಕೆ.ಆರ್. ದಯಾನಂದ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಚಂದ್ರಶೇಖರ ನಾಯ್ಕ, ಬಾಗೇನಹಾಳು ಕೊಟ್ರಬಸಪ್ಪ, ಹಳಿಯೂರು ಸಿದ್ದಪ್ಪ ಮತ್ತಿತರ ಸಮಿತಿ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net