

ಚಿತ್ರದುರ್ಗ: ದೇಶದ ಹೆಮ್ಮೆಯ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಅವರ ಜೀವ ರಕ್ಷಣೆಗೆ ಪ್ರಾರ್ಥಿಸಿ ನಗರದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶನಿವಾರ ಮಹಾ ಮೃತ್ಯುಂಜಯ ಹೋಮ, ವಿಶೇಷ ಪೂಜೆ ಸಲ್ಲಿಸಲಾಯಿತು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಅಮಾನುಷ ಕೃತ್ಯದ ಪ್ರತೀಕಾರವಾಗಿ ನಡೆಸುತ್ತಿರುವ ಆಪರೇಷನ್ ಸಿಂಧೂರ ಯಶಸ್ವಿಗೆ ಪ್ರಾರ್ಥಿಸಲಾಯಿತು.
ಜಾಗತಿಕ ಮಟ್ಟದಲ್ಲಿ ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನದ ವಿರುದ್ಧ ನಮ್ಮ ಸೇನೆ ಹೋರಾಡುತ್ತಿದೆ. ಭಾರತದ ಸೈನಿಕರು, ಸೇನಾ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಯಾವುದೇ ರೀತಿಯ ಜೀವ ಹಾನಿಯಾಗದಿರಲಿ, ಶತ್ರು ಸಂಹಾರವಾಗಲಿ. ಬೇಗನೆ ನಮ್ಮ ದೇಶದಲ್ಲಿ ಶಾಂತಿ ನೆಲಸಲಿ ಎಂದು ಸಂಕಲ್ಪ ಮಾಡಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಶರಣ್‌ಕುಮಾರ್, ಕಾರ್ಯದರ್ಶಿ ಎಂ.ಪಿ. ವೆಂಕಟೇಶ್, ನಿರ್ದೇಶಕರಾದ ಮೋಹನ್‌ಕುಮಾರ್, ರೇಷ್ಮೆ ಮಂಜುನಾಥ್, ವಕೀಲ ವಿಜಯಕುಮಾರ್, ರಮೇಶ್, ಮೋಹನ್‌ಗಾಂಧಿ, ಪ್ರಧಾನ ಅರ್ಚಕ ರಘು ಇತರರು ಇದ್ದರು.