ಭಾರತೀಯ ಯುವ ಶಕ್ತಿಯ ಸದುಪಯೋಗ ಅಗತ್ಯ

11111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ರಾಷ್ಟ್ರೀಯ ಭಾವೈಕ್ಯಕ್ಕೆ ಅತ್ಯುತ್ತಮ ಉದಾಹರಣೆ. ಹಲವಾರು ಭಾಷೆ, ಆಚರಣೆ, ಆಹಾರ, ವೈವಿಧ್ಯಗಳ ಮಧ್ಯೆ ನಾವು ಭಾರತೀಯರು ಎನ್ನುವುದು ಸಹೋದರತ್ವಕ್ಕೆ ಸಾಕ್ಷಿ. ಭಾರತ ದೊಡ್ಡ ಯುವಶಕ್ತಿ ಹೊಂದಿದ್ದು, ಅದರ ಸದುಪಯೋಗವಾಗಬೇಕು. ಯುವಕರಲ್ಲಿ ದೇಶಪ್ರೇಮ, ಗೌರವ ಮೂಡಿಸುವ ಕಾರ್ಯವಾಗಬೇಕು ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಕೆ.ಎಚ್. ಕಬ್ಬೂರ ತಾಂತ್ರಿಕ ಮಹಾವಿದ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಆಯೋಜಿಸಿರುವ ಎನ್.ಎಸ್.ಎಸ್‌ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಐಕ್ಯತೆಗೆ ಧಕ್ಕೆ ತರುವ ವಿಷಯಗಳ ಬಗ್ಗೆ ಚರ್ಚೆ ನಡೆದು, ಅವುಗಳಿಂದ ಹೊರಬರುವ ಚಿಂತನೆ ಮೂಡಲು ರಾಷ್ಟ್ರೀಯ ಭಾವೈಕ್ಯ ಶಿಬಿರ ಸೂಕ್ತ ವೇದಿಕೆ. 2047ಕ್ಕೆ ಭಾರತ ಸ್ವಾತಂತ್ರ್ಯ ಮಹೋತ್ಸವದ 100ನೇ ವರ್ಷ. ಆಗ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕ ಕೆ.ವಿ. ಖಾದ್ರಿ ನರಸಿಂಹಯ್ಯ ಮಾತನಾಡಿ, ಎನ್‌ಎಸ್‌ಎಸ್ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಯುವ ಸಮುದಾಯದ ಗುಂಪು. ಜಾತಿ, ಮತ, ಪಕ್ಷ, ಧರ್ಮಗಳನ್ನು ಮೀರಿ ಒಗ್ಗಟ್ಟಿನ ಗುಣ ಕಲಿಸುವ ತಾಣ ಭಾವೈಕ್ಯತಾ ಶಿಬಿರ ಎಂದರು.
ಕರ್ನಲ್ ವಿವೇಕ್ ಅಳಗವಾಡಿ ಮಾತನಾಡಿ, ನಾನು ಕನ್ನಡಿಗ, ತಮಿಳಿಗ, ಮರಾಠಿಗ ಎನ್ನುವ ಬದಲು ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿ. ಭಾರತೀಯತೆಗೆ ಭಾರತೀಯ ಸೇನೆ ಅತ್ಯುತ್ತಮ ಉದಾಹರಣೆ ಎಂದರು.
ಪ್ರಗತಿಪರ ರೈತ ಮಹಿಳೆ ದಾಕ್ಷಾಯಿಣಿ ರಾಮನಗೌಡ, ಡಾ. ಗುರುಪ್ರಸಾದ ಹೂಗಾರ ಹಾಗೂ ಡಾ. ಎಂ.ಬಿ. ದಳಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಕ್ಷಿಣ ಭಾರತದ 5 ರಾಜ್ಯಗಳ 150 ವಿದ್ಯಾರ್ಥಿಗಳು ತಮ್ಮ ಪಾರಂಪರಿಕ ಉಡುಗೆಗಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ವಸಂತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸೂರಜ್ ಜೈನ, ಮಹಾವೀರ ಉಪಾಧ್ಯೆ, ವಿ.ಕೆ. ಭರಣಿ, ಇತರರಿದ್ದರು. ಈರಪ್ಪ ಪತ್ತಾರ ಸ್ವಾಗತಿಸಿದರು, ವಸಂತ ಐಹೊಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net