ಭಾರತೀಯ ಯುದ್ಧ ತರಬೇತಿಗೆ ಜಪಾನ್ ಫಿದಾ

9 BGV manju 1
ಬೆಳಗಾವಿಯ ಎಂಎಲ್‌ಐಆರ್‌ಸಿ ರೋಹಿಡೇಶ್ವರ ಕ್ಯಾಂಪ್‌ನಲ್ಲಿ ನಿರ್ಮಿಸಿದ್ದ ಡೆಮೋ ಗ್ರಾಮವೊಂದರಲ್ಲಿ ಭಯೋತ್ಪಾದಕರ ಅಡಗು ತಾಣ ಸುತ್ತುವರಿದ ಭಾರತ- ಜಪಾನ್ ಯೋಧರು ಕಲ್ಪಿತ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿ ನಡೆಸಿದರು.
Published on

ಬೆಳಗಾವಿ: ಭಾರತೀಯ ಸೈನಿಕರಿಂದ ನಾವು ಪಡೆದ ತರಬೇತಿ, ಕ್ಲಿಷ್ಟಕರ ಕಾರ್ಯಾಚರಣೆ ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ಇಲ್ಲಿನ ಯೋಧರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಭಾಷೆಯಲ್ಲಿಯೂ ಪರಿಣತಿ ಹೊಂದಿದ್ದಾರೆ. ಇಲ್ಲಿನ ಜಂಟಿ ಸಮರಾಭ್ಯಾಸದ ತರಬೇತಿ, ಕಲಿಕೆಗಳು ಭವಿಷ್ಯದ ದಿನಗಳಲ್ಲಿ ಜಪಾನ್‌ಗೂ ಸಹ ಬಹಳ ಅನುಕೂಲವಾಗಲಿದೆ…
ಇದು, ಬೆಳಗಾವಿ ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ)ದಲ್ಲಿ ಫೆ. 27ರಿಂದ ಮಾ.10ರ ವರೆಗೆ ನಡೆದ 3ನೇ ಆವೃತ್ತಿಯ ‘ಧರ್ಮ ಗಾರ್ಡಿಯನ್-2022’ರ ಜಂಟಿ ಸಮರಾಭ್ಯಾಸ ನಡೆಸಿದ ಜಪಾನ್ ಯೋಧರು, ಭಾರತೀಯ ಸೇನೆಯ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪರಿ.

ಧೈರ್ಯಶಾಲಿ ಯೋಧರು: ಭಾರತೀಯ ಸೈನಿಕರು ಯಾವುದೇ ಸ್ಥಳದಲ್ಲಿಯೂ, ಎಂತಹ ವಿಷಮ ಸ್ಥಿತಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್‌ನಂತಹ ಗೌಪ್ಯ ಕಾರ್ಯಚರಣೆ ನಡೆಸುವಲ್ಲಿ ನಿಪುಣರು. ಅಷ್ಟೇ ಧೈರ್ಯಶಾಲಿಗಳು. ಭಾರತೀಯ ಸೇನೆಯ ಸಾಮರ್ಥ್ಯ ಏನೆಂಬುದನ್ನು ಜಪಾನ್ ಯೋಧರು ಸಮರಾಭ್ಯಾಸದಲ್ಲಿ ಅರಿತುಕೊಂಡಿದ್ದಾರೆ.

ಭಾರತೀಯರಿಂದ ನಾವು ಸಾಕಷ್ಟು ಯುದ್ಧ ನಿಪುಣತೆ ಕಲಿತುಕೊಂಡಿದ್ದೇವೆ. ಪ್ರಮುಖವಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ, ಆ ಕುರಿತು ಯೋಜನೆಯ ಸಿದ್ಧತೆ, ಜವಾಬ್ದಾರಿಗಳ ಹಂಚಿಕೆ, ತಂತ್ರಜ್ಞಾನಗಳ ಬಳಕೆ ಸೇರಿದಂತೆ ಸಾಕಷ್ಟು ಹೊಸ ವಿಷಯಗಳನ್ನು ಭಾರತೀಯ ಯೋಧರಿಂದ ನಮ್ಮ ಸೈನಿಕರು ಕಲಿತುಕೊಂಡಿದ್ದಾರೆ ಎಂದು ಜಪಾನ್ ಸೇನಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಜಪಾನ್ ಸೈನಿಕರಲ್ಲಿದೆ ತಾಳ್ಮೆ: ಜಪಾನ್ ಸೈನಿಕರಲ್ಲಿ ಬಹಳ ಏಕಾಗ್ರತೆ, ಬದ್ಧತೆ, ತಾಳ್ಮೆ ಇದೆ. ಜಂಟಿ ಸಮರಾಭ್ಯಾಸದಲ್ಲಿ ಅವರ ಸೈನಿಕರೂ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಜಂಟಿ ಕಾರ್ಯಾಚರಣೆಯಿಂದ ವೃತ್ತಿ ಹಾಗೂ ವೈಯಕ್ತಿಕ ಕೌಶಲ ವೃದ್ಧಿಗೂ ಸಹಕಾರಿಯಾಗಿದೆ. ತರಬೇತಿ ಸಂದರ್ಭದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಅಲ್ಲದೆ, ಹೊಸ ತಂತ್ರಗಾರಿಕೆಗಳನ್ನೂ ಬಳಸಿಕೊಂಡೆವು ಎಂದು ಭಾರತೀಯ ಸೇನೆಯ ರೇಡ್ ಪಾರ್ಟಿ ಕಮಾಂಡರ್ ನಾಯಕ ಸುಬೇದಾರ್ ರಾಮ್ ಚವ್ಹಾಣ, ಮೇಜರ್ ರಾಜಪಾಲ್‌ಸಿಂಗ್ ರಾಠೋಡ್, ಹವಾಲ್ದಾರ್ ಅಭಿಜಿತ ಪಾಟೀಲ ಮಾಹಿತಿ ನೀಡಿದರು. 115ನೇ ಬ್ರಿಗ್ರೇಡ್‌ನ ಕಮಾಂಡರ್ ಎನ್.ಎಸ್.ಸೋಹಲ್ ಹಾಗೂ ಜಪಾನ್ ಸೇನೆಯ ಅಧಿಕಾರಿಗಳು ಇದ್ದರು.

ಉಗ್ರರ ವಿರುದ್ಧ ಯಶಸ್ವಿ ಕಲ್ಪಿತ ಕಾರ್ಯಾಚರಣೆ: ಭಾರತೀಯ ಸೇನೆಯ 115ನೇ ಬ್ರಿಗೇಡ್‌ನ 40 ಮತ್ತು ಜಪಾನ್ ಸೇನೆಯ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಪೋರ್ಸ್‌ನ 30-ಇನ್‌ಫೆಂಟ್ರಿ ರೆಜಿಮೆಂಟ್‌ನ 40 ಯೋಧರು ಸಮರಾಭ್ಯಾಸ ನಡೆಸಿದರು. 10 ದಿನ ತರಬೇತಿ ಪಡೆದ ಬಳಿಕ ಕೊನೆಯ ಎರಡು ದಿನ ಭಯೋತ್ಪಾದಕರ ವಿರುದ್ಧ ಕಲ್ಪಿತ ಕಾರ್ಯಾಚರಣೆ ನಡೆಸಿದರು. ರೋಹಿಡೇಶ್ವರ ಕ್ಯಾಂಪ್‌ನಲ್ಲಿ ಡೆಮೋ ಗ್ರಾಮವೊಂದನ್ನು ನಿರ್ಮಿಸಿ, ಅಲ್ಲಿ ಅಡಗಿದ್ದ ಉಗ್ರರನ್ನು ಸೆದೆ ಬಡಿದು ಗ್ರಾಮಸ್ಥರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಯೋಧರು ಅತ್ಯಾಧುನಿಕ ಡ್ರೋನ್ ಹೆಲಿಕಾಪ್ಟರ್, ನ್ಯಾನೋ ಡ್ರೋನ್, ಮಾನವ ರಹಿತ ತುರ್ತು ವಾಹನಗಳನ್ನು ಬಳಕೆ ಮಾಡಿ ಜಂಟಿ ಸಮರಾಭ್ಯಾಸ ನಡೆಸಿದರು.

ಖಾನಪುರ ಐಐಟಿ ವಿದ್ಯಾರ್ಥಿಗ ಸಾಧನೆ: ಭಾರತ ಮತ್ತು ಜಪಾನ್ ಸಮರಾಭ್ಯಾಸದಲ್ಲಿ ಖಾನಪುರ ಐಐಟಿ ವಿದ್ಯಾರ್ಥಿಗಳು ತಯಾರಿಸಿದ ಮಾನವ ರಹಿತ ತುರ್ತು ಯುದ್ಧ ವಾಹನ, ಡ್ರೋನ್ ಹೆಲಿಕಾಪ್ಟರ್, ನ್ಯಾನೋ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ, ವಿದ್ಯಾರ್ಥಿಗಳು ತಯಾರಿಸಿದ ಅತ್ಯಾಧುನಿಕ ಯುದ್ಧ ಯಂತ್ರಗಳು ಯೋಧರ ಮನ ಸೆಳೆದವು.

ಭಾಷೆಯ ಗಡಿಯ ನಡುವೆಯೂ ಚೆನ್ನಾಗಿಯೇ ಕಾರ್ಯಾಚರಣೆ ನಡೆಸಿದ್ದೇವೆ. ನಮ್ಮ ಯೋಧರು ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಭಾರತೀಯ ಸೇನೆಯೊಂದಿಗೆ ಬೆರೆತು ತರಬೇತಿ ಪಡೆದಿದ್ದಾರೆ. ಭವಿಷ್ಯದ ದಿನಗಳಲ್ಲಿ ಇಲ್ಲಿ ಕಲಿತ ಸಮರಾಭ್ಯಾಸ ನಮ್ಮ ಸೈನಿಕರಿಗೆ ಬಹಳ ಅನುಕೂಲವಾಗಲಿದೆ.| ಕರ್ನಲ್ ಲಾಂಡೋಜಪಾನ್ ಸೇನೆಯ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಪೋರ್ಸ್‌ನ ಅಧಿಕಾರಿಜಂಟಿ ಸಮರಾಭ್ಯಾಸ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಯೋಜನೆ, ಅಭ್ಯಾಸ ಎಲ್ಲವೂ ಉತ್ತಮವಾಗಿತ್ತು. ಅನುಷ್ಠಾನವೂ ಚೆನ್ನಾಗಿತ್ತು. ಎರಡೂ ದೇಶಗಳ ಯುವ ಸೈನಿಕರು ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ವೃತ್ತಿಪರರ ರೀತಿಯಲ್ಲಿ ಬಳಸಿದ್ದಾರೆ. ಪರಸ್ಪರ ಹೊಂದಿಕೊಂಡು ಆತ್ಮವಿಶ್ವಾಸದಿಂದ ತರಬೇತಿ ಪಡೆದಿದ್ದಾರೆ. ಈಗ ಇವರು ಎಲ್ಲಿ ಬೇಕಾದರೂ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದ್ದಾರೆ.| ಭವನೀಶ್‌ಕುಮಾರ ಮೇಜರ್ ಜನರಲ್ (ಜಿಒಸಿ)

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net