ಭಾರತೀಯ ಪರಂಪರೆ ಕಟ್ಟಿಕೊಟ್ಟ ರಾಮಾಯಣ, ಮಹಾಭಾರತ : ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ

9
Published on

ಮೈಸೂರು: ರಾಮಾಯಣ, ಮಹಾಭಾರತದ ಕಥೆಗಳು ದೊಡ್ಡವರಲ್ಲಿ ಜ್ಞಾನ ಹೆಚ್ಚಿಸಿದರೆ ಮಕ್ಕಳಲ್ಲಿ ಸಂಸ್ಕೃತಿಯ ಬಗ್ಗೆ ಗೌರವ ಉಂಟು ಮಾಡುತ್ತದೆ ಎಂದು ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸ್ವಾಮೀಜಿ ಪರಿಕಲ್ಪನೆಯಲ್ಲಿ ಲೇಖಕ ಡಾ.ಬೆ.ಗೋ. ರಮೇಶ್ ರಚಿಸಿ, ಚೇತನ ಬುಕ್ ಹೌಸ್ ಪ್ರಕಾಶನದಲ್ಲಿ ಮಕ್ಕಳಿಗಾಗಿ ಹೊರತಂದಿರುವ ದಿನಕ್ಕೊಂದು ಪೌರಾಣಿಕ ಕಥೆ ಎಂಬ 12 ಕೃತಿಗಳನ್ನು ಶುಕ್ರವಾರ ಆಶ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯನ್ನು ಕಟ್ಟಿಕೊಟ್ಟ ರಾಮಾಯಣ, ಮಹಾಭಾರತದಲ್ಲಿ ಅನೇಕ ಕತೆಗಳು ಇದ್ದು, ಅವುಗಳು ದೊಡ್ಡವರಲ್ಲಿ ಜ್ಞಾನ, ಬದುಕಿನ ಮೌಲ್ಯವನ್ನು ತಿಳಿಸುತ್ತದೆ. ಹಾಗೆಯೇ ಮಕ್ಕಳಲ್ಲಿ ಸಂಸ್ಕೃತಿಯ ಬಗ್ಗೆ ಗೌರವ ಉಂಟು ಮಾಡುವಂತೆ, ಸುಸಂಸ್ಕೃತವಾಗಿ ನಡೆಯುವಂತೆ ಮಾಡುತ್ತದೆ ಎಂದು ಹೇಳಿದರು.
ಬಿಡುಗಡೆಗೊಂಡಿರುವ ಎಲ್ಲ ಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು, 360 ಕಥೆಗಳಿವೆ. ಈ ಹಿಂದೆ ಪತ್ರಿಕೆಯಲ್ಲಿ ದಿನಕ್ಕೊಂದು ನೀತಿ ಕಥೆಗಳು ಪ್ರಕಟವಾಗುತ್ತಿದ್ದವು, ಇದರಿಂದ ಮಕ್ಕಳು, ದೊಡ್ಡವರಲ್ಲಿ ಓದುವ ಆಸಕ್ತಿ ಬೆಳೆಯುತ್ತಿತ್ತು. ಆದರೆ ಈಗ ಓದುವ ಹವ್ಯಾಸ ಕಡಿಮೆ ಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಓದುವ ಹಾಗೂ ಕೇಳುವ ಹವ್ಯಾಸ ಮೂಡಿಸಬೇಕು. ಇದಕ್ಕಾಗಿ ನಾನು ಯಾವುದೇ ಕಥೆಗಳನ್ನು ಹೇಳಬೇಕಾದರೆ ಪೂರ್ಣಗೊಳಿಸದೆ ಅರ್ಧ ಹೇಳಿ ನಿಲ್ಲಿಸುತ್ತೇನೆ. ಕೇಳುಗರು ಮುಂದಿನ ಭಾಗದ ಬಗ್ಗೆ ಹೇಳಿ ಎಂದಾಗ ಬಾಕಿ ವಿಚಾರಗಳು ಪುಸ್ತಕದಲ್ಲಿದೆ. ಆ ಪುಸ್ತಕಗಳನ್ನು ಓದಿ ಎಂದು ಅವರಲ್ಲಿ ಓದುವ ಆಸಕ್ತಿಯನ್ನು ಮೂಡಿಸುತ್ತೇನೆ. ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗಿ ಸಾಹಿತ್ಯ, ಕಥೆಗಳನ್ನು ಬರೆಯುವುದು ರೂಢಿಯಾಗುತ್ತದೆ ಎಂದು ತಿಳಿಸಿದರು.
ಜನರಲ್ಲಿ ಓದುವುದಕ್ಕೆ ಉತ್ತೇಜನ ನೀಡಲು ಆಶ್ರಮದಿಂದಲೂ ಎಸ್‌ಜಿಎಸ್ ಎನ್ನುವ ಪೋರ್ಟಲ್ ರೂಪಿಸಿದ್ದು, ಅದು ಕನ್ನಡ, ತೆಲುಗು, ತಮಿಳು, ಇಂಗ್ಲೀಷ್, ಹಿಂದಿ ಸೇರಿದಂತೆ ಎಂಟು ಭಾಷೆ ಕಥೆಗಳು ಸಿಗುತ್ತವೆ. ನಾನಾ ರಾಜ್ಯ, ದೇಶದ ಜನತೆ ಬಹಳ ಉತ್ಸುಕರಾಗಿ ಕಥೆಗಳನ್ನು ಓದುತ್ತಿದ್ದಾರೆ. ಇದರಲ್ಲಿ ಬರುವ ಕಥೆಗಳನ್ನು ಮುಂದಿನ ದಿನಗಳಲ್ಲಿ ಮುದ್ರಿಸಿ ಪ್ರಕಟಣೆ ಮಾಡಬೇಕೆಂಬ ಆಸೆ ಇದೆ ಎಂದರು.
ಕೃತಿಗಳ ಕುರಿತು ಲೇಖಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ಹಿಂದೆ ಕಥೆಗಳನ್ನು ಕೇಳಿದರೆ, ವೈಕುಂಠ ದರ್ಶನವಾಗುತ್ತದೆ ಎಂದು ಭಾಸವಾಗುತ್ತಿತ್ತು. ಇಂದು ಕಥೆಗಳು ನಮ್ಮನ್ನು ವ್ಯಥೆಯತ್ತ ಕೊಂಡೊಯ್ಯುತ್ತಿದೆ. ಆದರೆ, ಇಂದು ಬಿಡುಗಡೆಯಾಗಿರುವ ಮಕ್ಕಳ ಎಲ್ಲ ಕೃತಿಗಳು ಅಮೂಲ್ಯ ರತ್ನಗಳಂತಿವೆ ಎಂದು ಬಣ್ಣಿಸಿದರು.
ಪುಸ್ತಕ ಅರ್ಥ ಪೂರ್ಣ ಕಥೆಗಳನ್ನು ಒಳಗೊಂಡಿದ್ದು, ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಭರತ, ರಾಮ, ಹರಿಶ್ಚಂದ್ರನ ಕಥೆ, ನೀತಿ ಕಥೆ, ಪ್ರಾಣಿ-ಪಕ್ಷಗಳ ಕಥೆ ಸೇರಿದಂತೆ ಎಲ್ಲ ರೀತಿಯ ಪೌರಾಣಿಕ ಕಥೆಗಳು ಈ ಕೃತಿಗಳಲ್ಲಿವೆ ಎಂದು ತಿಳಿಸಿದರು.
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪೌರಾಣಿಕ ಕಥೆ ಹೇಳುವ ಯುಗ ಮುಗಿಯಿತು. ಮಕ್ಕಳಿಗೆ ಕಥೆ ಹೇಳುವುದು ಪೋಷಕರ ಹೊಣೆಯಾದರೂ ಎಲ್ಲರೂ ರ‌್ಯಾಂಕ್ ಹಿಂದೆ ಬಿದ್ದಿದ್ದಾರೆ. ಭಾರತೀಯ ಸಂಸ್ಕೃತಿ ಅರ್ಥ ಮಾಡಿಕೊಂಡರೆ ರ‌್ಯಾಂಕ್‌ಗಿಂತ ಬದುಕಿನ ಪಾಠ ಕಲಿಸುವುದು ಅಗತ್ಯವಾಗಿದೆ ಎಂದರು.
ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ಸ್ವಾಮಿ, ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ರಂಗಕರ್ಮಿ ರಾಜಶೇಖರ್ ಕದಂಬ, ಕೃತಿ ಲೇಖಕ ಡಾ.ಬೆ.ಗೋ. ರಮೇಶ್, ಹಿರಿಯ ಪತ್ರಕರ್ತ ಸತ್ಯಲಿಂಗರಾಜ್, ಕಾರ್ಯಕ್ರಮ ಸಂಯೋಜಕ ಎಸ್.ಪ್ರಕಾಶ್‌ಬಾಬು, ಕನ್ನಡ ಸಾಹಿತ್ಯ ಕಲಾಕೂಟದ ಎಂ. ಚಂದ್ರಶೇಖರ್, ಲೇಖಕ ರಂಗನಾಥ ಮೈಸೂರು, ಚೇತನ ಬುಕ್‌ಹೌಸ್‌ನ ನಟರಾಜ್ ಚೌದರಿ, ನಾಗಾರ್ಜುನ ಚೌಧರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net