

ಚಿತ್ರದುರ್ಗ: ಭಾರತೀಯ ತತ್ವಶಾಸ್ತ್ರ ಹಾಗೂ ದರ್ಶನ ಶಾಸ್ತ್ರಕ್ಕೆ ಆದಿಗುರು ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
32 ವರ್ಷಗಳ ಕಾಲ ಬದುಕಿದ್ದ ಶಂಕರಾಚಾರ್ಯರು ಅಲ್ಪಕಾಲದಲ್ಲಿಯೇ ಬೃಹತ್ ಸಾಧನೆ ಮಾಡಿದವರಾಗಿದ್ದಾರೆ. ಇವರ ಅದ್ವೈತ ಸಿದ್ಧಾಂತ ಆತ್ಮ ಹಾಗೂ ಪರಮಾತ್ಮ ಎರಡು ಒಂದೇ ಎಂದು ಹೇಳಿದೆ. ನಮ್ಮನ್ನು ನಾವು ಅರಿತರೆ, ಬೇರೆಯವರನ್ನು ಅರ್ಥೈಸಿಕೊಳ್ಳಬಹುದು ಎಂದರು.
ಬಾಲ್ಯದಲ್ಲಿಯೇ ಶಂಕರರು ಅದ್ಬುತ ಜ್ಞಾನ ಸಂಪಾದಿಸಿದ್ದರು. ಏಳನೇ ಶತಮಾನದಲ್ಲೇ ಅಖಂಡ ಭಾರತವನ್ನು ಸುತ್ತಿ ನಾಲ್ಕು ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿದರು. ಶೃಂಗೇರಿಯಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಪೀಠ ಇಂದಿಗೂ ಜ್ಞಾನದ ಮಹಿಮೆ ಸಾರುತ್ತಿದೆ. ನಾವೆಲ್ಲರೂ ಧರ್ಮ, ಜಾತಿ, ಸಂಕೋಲೆಗಳನ್ನು ಮೀರಿ ಅಲ್ಪ ಮಾನವರಿಂದ ವಿಶ್ವಮಾನರಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಉಪನ್ಯಾಸ ನೀಡಿದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ಸತೀಶ್, ಶಂಕರಾಚಾರ್ಯರ ಜನ್ಮದಿನವನ್ನು ಭಾರತದಲ್ಲಿ ತತ್ವಜ್ಞಾನಿಗಳ ದಿನವೆಂದು ಆಚರಿಸಲಾಗುತಿದೆ. ರಾಜ್ಯ ಸರ್ಕಾರದಿಂದ ಅವರ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ. ಅದ್ವೈತ ಸಿದ್ಧಾಂತವನ್ನು ಅರ್ಥೈಸಿಕೊಳ್ಳುವುದು ಕಷ್ಟದ ವಿಷಯವಾಗಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರ ಬಗ್ಗೆ ತಳಸ್ಪರ್ಶಿಯಾಗಿ ಅಧ್ಯಯನ ಮಾಡದ ಹೊರತು ಭಾರತದ ಇತಿಹಾಸ ಅರಿಯ ಲು ಸಾಧ್ಯವಿಲ್ಲ. ಹಿಂದು ಸನಾತನ ಧರ್ಮ ರಕ್ಷಣೆಗೆ ಶಂಕರಾಚಾರ‌್ಯರ ಕೊಡುಗೆ ಅಪಾರವಾಗಿದೆ. ಒಂದು ಇಡೀ ವಿಶ್ವವಿದ್ಯಾಲಯ ಮಾಡ ಬಹುದಾದ ಕಾರ್ಯವನ್ನು ಶಂಕರಾಚಾರ್ಯರು ಒಬ್ಬರೇ ಮಾಡಿದ್ದಾರೆ. ಅವರು ಬರೆದ ಭಾಷ್ಯಗಳು, ಗ್ರಂಥಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರೆ ಮಾತ್ರ ಶಂಕರರ ತತ್ವಗಳನ್ನು ಅರಿಯಬಹುದು ಎಂದರು.
ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕಾರ್ಯದರ್ಶಿ ಪ್ರಾಣೇಶ್‌ರಾವ್, ಡಿಎಚ್‌ಒ ಡಾ. ಜಿ.ಪಿ. ರೇಣುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಹಾಗೂ ಬ್ರಾಹ್ಮಣ ಸಮುದಾಯದ ಮುಖಂಡರು ಇದ್ದರು. ನವೀನ್ ಮಸ್ಕಲ್ ನಿರೂಪಿಸಿದರು. ಕಲಾವಿದೆ ಮೀನಾಕ್ಷಿ ತಂಡದವರು ಶಂಕರಾಚಾರ್ಯರು ರಚಿಸಿದ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಶ್ರೀ ವೈಷ್ಣವ ವಟುಗಳಿಗೆ ಉಪನಯನ
ಪರಶುರಾಮಪುರ: ಗ್ರಾಮದ ಪಾವಗಡ ರಸ್ತೆಯ ಲಕ್ಷ್ಮೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಶ್ರೀ ವೈಷ್ಣವ ವಟುಗಳಿಗೆ ಉಪನಯನ, ಸಮಾಶ್ರಯಣ, ಮುದ್ರಾಧಾರಣೆ ಧಾರ್ಮಿಕ ಕಾರ್ಯಗಳು ನೆರವೇರಿದವು.
ಬೆಳಗ್ಗೆ ದೇಗುಲದಲ್ಲಿ ಸುಪ್ರಭಾತ ಸೇವೆ, ವೇದ ಪಾರಾಯಣ, ಗೋಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಉಪನಯನ ಕಾರ್ಯಕ್ರಮದ ಪೌರೋಹಿತ್ಯವನ್ನು ಉಭಯ ವೇದಾಂತ ನಿದ್ರಘಟ್ಟ ನರಸಿಂಹಮೂರ್ತಿ, ಶಶಿಶರ್ಮ, ಶ್ರೀ ರಾಮು ರಾಮಾನುಜಂ ಶ್ರೀನಿವಾಸರಾಜು, ಸುಧಾ ಗುಜ್ಜನಡು, ಸುನೀಲ್ ಆಚಾರ್ಯ, ತುಳಸೀ ಆಚಾರ್ಯ ನಡೆಸಿಕೊಟ್ಟರು.
ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ವೈಷ್ಣವ ಸಮುದಾಯದ ವಟುಗಳಿಗೆ ಉಪನಯನ, ಸಮಾಶ್ರಯಣ ಹಾಗೂ ಮುದ್ರಾಧಾರಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ರಾಯದುರ್ಗ ತಾಲೂಕು ಮಲ್ಲಾಪುರಂ ವಿಪ್ರಮಲೈ ವಿಶಿಷ್ಟಾದ್ವೈತ ವಿಶ್ವಮಾತಾಶ್ರಮದ ಶ್ರೀ ರಾಮಮೂರ್ತಿ ಸ್ವಾಮೀಜಿ ಹೇಳಿದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಟಿ.ಎಲ್. ವೆಂಕಟರಾಜು ಅಧ್ಯಕ್ಷ ಎಲ್. ಗೋಪಾಲ್, ಖಜಾಂಚಿ ಎಸ್.ಎಚ್. ಸತ್ಯನಾರಾಯಣಮೂರ್ತಿ, ಕೆ.ಬಿ. ರಾಮಕೃಷ್ಣ, ಎಸ್. ಹನುಮಂತರಾಯ, ಪ್ರಭಾಕರ, ಗೋಪಾಲ, ಪಿ.ಎಸ್. ಸುರೇಶ ಇತರಿದ್ದರು. ಸಮುದಾಯದ ಹಿರಿಯರನ್ನು ಗೌರವಿಸಲಾಯಿತು.
ಪೋಟೋ(ಪಿಆರ್‌ಪುರ ರಾಮಾನುಜ ಹಬ್ಬ 2)
ಪರಶುರಾಮಪುರ ಲಕ್ಷ್ಮೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವದಲ್ಲಿ ಶ್ರೀ ರಾಮಮೂರ್ತಿ ಸ್ವಾಮೀಜಿ ಶ್ರೀ ವೈಷ್ಣವ ಸಮುದಾಯದ ವಟುಗಳಿಗೆ ಉಪನಯನ ಕಾರ್ಯ ನಡೆಸಿಕೊಟ್ಟರು.
-------------------
ಲೋಕ ಜ್ಞಾನ ಕಂಡುಕೊಂಡ ಶಂಕರರು
ಚಳ್ಳಕೆರೆ: ತಾಲೂಕು ಬ್ರಾಹ್ಮಣ ಸಂಘದಿಂದ ನಗರದ ಬಳ್ಳಾರಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರೀ ಶಂಕರ, ಗಾಯತ್ರಿ ಜಯಂತಿ ಆಚರಿಸಲಾಯಿತು.
ಬೆಳಗ್ಗೆ ಸುಪ್ರಭಾತ, ಭಕ್ತಿಗೀತೆ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ, ವೇದಘೋಷಗಳೊಂದಿಗೆ ಪುಷ್ಪಾಲಂಕೃತಗೊಂಡ ಶ್ರೀ ಶಂಕರಾಚಾರ್ಯರ ರಥೋತ್ಸವ ನೆರವೇರಿತು. ನಂತರ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಹಿಂದು ಸಂಸ್ಕೃತಿಯಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಪಾದಿತ ಸಿದ್ಧಾಂತ ದಾಖಲೆಯಾಗಿ ಉಳಿದಿದೆ. ಕಡಿಮೆ ವಯಸ್ಸಿನಲ್ಲೆ ದೇಶ ಪರ್ಯಟನೆ ಮಾಡಿ ಲೋಕ ಜ್ಞಾನ ತಿಳಿದವರು. ನಾಲ್ಕು ವೇದಗಳಲ್ಲಿ ಪಾಂಡಿತ್ಯ ಸಂಪಾದನೆ ಮಾಡಿದ್ದರು. ಶೃಂಗೇರಿಯಲ್ಲಿ ಮಠ ಸ್ಥಾಪನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಅನಂತರಾಮ್ ಗೌತಮ್ ಮಾತನಾಡಿ, ಪಾವಗಡ ರಸ್ತೆಯ ಮುಕ್ತಿಧಾಮ ಬಳಿ 60 ಅಡಿ ಉದ್ದದ ಕಾಂಪೌಂಡ್ ನಿರ್ಮಾಣ, ಶಿಥಿಲಾವಸ್ಥೆ ತಲುಪಿರುವ ರಾಮಮಂದಿರ ಅಭಿವೃದ್ಧಿಗೆ ಶಾಸಕರಲ್ಲಿ ಮನವಿ ಮಾಡಿದರು. ಶೀಘ್ರದಲ್ಲೇ ಎರಡೂ ಕೆಲಸಗಳನ್ನು ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಆರ್. ಮಂಜುಳಾ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ಸದಸ್ಯರಾದ ಬಿ. ಶಿಲ್ಪಾ, ಸುಮಾ, ಸುಜಾತ, ಬಿ.ಟಿ. ರಮೇಶ್‌ಗೌಡ, ಹೊಯ್ಸಳ ಗೋವಿಂದ, ಎಂ.ಜೆ. ರಾಘವೇಂದ್ರ, ಆಡಳಿತ ಮಂಡಳಿ ಗೌರವಾಧ್ಯಕ್ಷ ಎಂ. ವಾಸುದೇವರಾವ್, ಉಪಾಧ್ಯಕ್ಷ ಎಂ. ನಾಗರಾಜ್‌ರಾವ್, ಕಾರ್ಯದರ್ಶಿ ಎಂ. ಸತ್ಯನಾರಾಯಣರಾವ್, ಸಹ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಖಜಾಂಚಿ ಜಿ. ಕೃಷ್ಣಮೂರ್ತಿ ಮತ್ತಿತರರಿದ್ದರು.
ದೇಶ ಕಂಡ ಮಹಾನ್ ದಾರ್ಶನಿಕ
ಹಿರಿಯೂರು: ದೇಶ ಕಂಡ ಮಹಾನ್ ದಾರ್ಶನಿಕ ಶಂಕರಾಚಾರ್ಯರ ತತ್ವ, ಆದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್. ಸ್ವಾಮಿನಾಥ್ ಹೇಳಿದರು.
ಇಲ್ಲಿನ ಶ್ರೀ ಶಂಕರ ಜ್ಞಾನ ಮಂದಿರ, ಚೈತನ್ಯ ವಿಪ್ರ ಮಹಿಳಾ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಶಂಕರಾಚಾರ್ಯರು ಆಧ್ಯಾತ್ಮಿಕ ಚಿಂತನೆ ಮೂಲಕ ಸಮಾನ ಮನೋಭಾವ, ಎಲ್ಲರೂ ಒಂದೇ ಎಂಬ ಭಾವನೆ ಮೂಲಕ ಸದೃಢ ರಾಷ್ಟ ನಿರ್ಮಾಣದ ಸಂದೇಶ ನೀಡಿದರು. ಸನಾತನ ಧರ್ಮ ಪುನರುತ್ಥಾನದ ಜತೆಗೆ ದೇಶದ ಮೂಲೆ ಮೂಲೆಗೂ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರತಿಪಾದಿಸಿದರು ಎಂದು ತಿಳಿಸಿದರು.
ಶ್ರೀ ಶಂಕರ-ಶಾರದಾ ಮಾತೆ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ, ನಗರದ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕೃಷ್ಣಕುಮಾರಿ ಮತ್ತು ತಂಡದವರು ಶಂಕರ ಭಜನೆ-ನಾಮ ಸಂಕೀರ್ತನೆ ಹಾಡುತ್ತಾ ಹೆಜ್ಜೆ ಹಾಕಿದರು.
ಬ್ರಾಹ್ಮಣ ಸಮಾಜದ ಮುಖಂಡರಾದ ರಾಮಸ್ವಾಮಿ, ವೆಂಕಟೇಶ್ ದೀಕ್ಷಿತ್, ಪ್ರಭಾಕರ್, ಪ್ರಸಾದ್, ಗಣೇಶ, ಮಂಜುನಾಥ, ರಾಜೇಂದ್ರ ದೇಸಾಯಿ, ನರಸಿಂಹ ಮೂರ್ತಿ, ಪಾಂಡುರಂಗರಾವ್, ಚಂದ್ರಶೇಖರ್, ಸುಗುಣಾ ದೀಕ್ಷಿತ್, ಶಾರದಸ್ವಾಮಿ, ಕೃಷ್ಣಕುಮಾರಿ, ಗೀತಾ, ರವಿಶಂಕರ್, ಎಂ.ಎಸ್. ರಾಘವೇಂದ್ರ, ಸತ್ಯನಾರಾಯಣ, ಚೈತನ್ಯ ವಿಪ್ರ ಮಹಿಳಾ ಮಂಡಳಿ ಪದಾಧಿಕಾರಿಗಳು ಇದ್ದರು.