

ಕಲಬುರಗಿ: ಸೇಡಂ ಬೀರನಳ್ಳಿ ಕ್ರಾಸ್ ಬಳಿ ಜ.೨೯ರಿಂದ ಫೆ.೬ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸ್ವದೇಶಿ ಚಿಂತನೆಗಳನ್ನು, ಭಾರತದ ಜ್ಞಾನ ಪರಂಪರೆ, ಪಾರಂಪರಿಕ ವಿಜ್ಞಾನದ ಶಕ್ತಿಯನ್ನು ತಿಳಿಪಡಿಸುವ ಅಧ್ಯಾಪಕರ ತರಬೇತಿ ಕಾರ್ಯಾಗಾರವನ್ನು ಉತ್ಸವದ ಪರ್ಯಾಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜೀವ ದೀಕ್ಷಿತ್ ವಿಚಾರ ವೇದಿಕೆಯ ಸಂಚಾಲಕ ಶಿವಾನಂದ ಕುಂಬಾರ ತಿಳಿಸಿದರು.
ಕಾರ್ಯಾಗಾರದಲ್ಲಿ ದೇಶ, ವಿದೇಶದಲ್ಲಿ ಭಾರತೀಯ ಜ್ಞಾನ, ವಿಜ್ಞಾನ, ಸಂಸ್ಕೃತಿಯ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡುವ ತಜ್ಞರು, ಸಂಶೋಧಕರು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರು ನಿಗದಿತ ಶುಲ್ಕ ಭರಿಸಿ , ಪತಿ, ಪತ್ನಿ, ಮಕ್ಕಳೊಂದಿಗೆ ಭಾಗವಹಿಸಬಹುದು. ಎಲ್ಲರಿಗೂ ೯ದಿನ ಊಟ ವಸತಿ ವ್ಯವಸ್ಥೆ ಇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಾಗಾರದಲ್ಲಿ ನೈತಿಕ ಮೌಲ್ಯ, ಗ್ರಾಮೀಣ ಆರ್ಥಿಕತೆ, ಆಯುಷ, ಆರೋಗ್ಯ ವಿಜ್ಞಾನ, ಸಾಮಾಜಿಕ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮಿಕ ವೈದಿಕ, ಭಕ್ತಿ, ಜನಪದ ಮತ್ತು ವಚನ ವಿಜ್ಞಾನಗಳು, ಪರಿಸರ ನೈರ್ಮಲ್ಯ ಮತ್ತು ಪ್ರಕೃತಿ, ಇತಿಹಾಸ, ಪುರಾತತ್ವ, ಪ್ರವಾಸ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಗಣಿತ, ಜ್ಯೋತಿಷ್ಯ, ಖಗೋಳಶಾಸ್ತç ಸೇರಿ ವಿವಿಧ ಭಾರತೀಯ ಜ್ಞಾನ ಪರಂಪರೆಯ ಕುರಿತು ತಜ್ಞರು, ಸಂಶೋಧಕರು, ಅಧ್ಯಯನಶೀಲರು, ಅನುಭವಿಗಳು ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯಸ್ಥ ಚೆನೈನ್ ಭಾರತ ಜ್ಞಾನ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಡಿ.ಕೆ.ಹರಿ ಮಾತನಾಡಿ, ಒಂದು ವಾರದ ಕಾರ್ಯಕ್ರಮದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಆಹಾರ ಪದ್ಧತಿ ಬಗ್ಗೆ ಐಐಟಿ, ಆಯುರ್ವೇದ, ಆಯುಷ್ ಸೇರಿ ದೇಶ, ವಿದೇಶದ ಖ್ಯಾತ ಯುಎಸ್‌ಎನ ರಾಜೀವ್ ಮಲ್ಹೋತ್ರಾ, ಡಾ.ಬಿ.ಬಿ.ಜಾ, ಡಾ.ಹರಿ, ಡಾ.ಡಿಕೆ ಹೇಮಾ ಹರಿ, ಡಾ.ದೇವಪ್ರಸಾದ ಮಿಶ್ರಾಮ, ಡಾ.ಉದಯ ದಿಕ್ಷಿತ್, ಡಾ.ಖಾದರ ವಲಿ, ಡಾ.ಹರಿ ಕೃಷ್ಣ ಸೇರಿದಂತೆ ಹಲವು ವಿಷಯ ತಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದೇಶದ ಜ್ಞಾನ ಪರಂಪರೆಯನ್ನು ಜನರಿಗೆ ತಲುಪಿಸಲು `ಪೂರ್ಣಂ' ಜರ್ನಲ್ ಬಿಡುಗಡೆ ಮಾಡಲಾಗುತ್ತಿದ್ದು, ದೇಶದ ಹಲವು ಭಾಷೆಗಳಲ್ಲಿ ಪ್ರಕಟವಾಗಲಿದೆ. ಪಾರಂಪರಿ, ನಾಟಿ ವೈದ್ಯರಿಗೂ ಇಲ್ಲಿ ವೇದಿಕೆ ಒದಗಿಸಲಾಗಿದೆ. ಈಗಾಗಲೇ ೩೦೦ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಎಂ.ಬಿ.ಪಾಟೀಲ್, ಕೃಷ್ಣಾ ಕೆಂಭಾವಿ, ಡಾ.ರಾಜಶೇಖರ ಬಸನಾಯಕ, ಪ್ರಭು ಪಾಟೀಲ್, ಅಕ್ಷಯ ಕುಲ್ಕರ್ಣಿ, ಅಶೋಕ ಗುರೂಜಿ ಇತರರಿದ್ದರು.
ಬೃಹತ್ ಸ್ವದೇಶಿ ಪ್ರದರ್ಶನ, ಮಾರಾಟ ಲೋಕ: ಭಾರತೀಯತೆಯ ಆಧಾರದಲ್ಲಿ ದೇಶವನ್ನು ಪುನರ್‌ನಿರ್ಮಾಣದ ಸಂಕಲ್ಪ ಹೊಂದಿದ ಸ್ವದೇಶಿ ಚಿಂತಕ ರಾಜೀವ್ ದೀಕ್ಷಿತರ ಸ್ವಾಭಿಮಾನ ಸ್ವದೇಶಿ ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ೩೦೦ ಮಳಿಗೆಗಳ ಬೃಹತ್ ರಾಜೀವ್ ಲೋಕ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ತಲೆ ಎತ್ತಲಿದೆ ಎಂದು ಶಿವಾನಂದ ಕಂಬಾರ ತಿಳಿಸಿದರು. ದೇಶದ ವಿವಿಧ ರಾಜ್ಯಗಳ ದೇಸಿ ಕರಕುಶಲ ತಯಾರಕರು, ಆಹಾರ, ಆರೋಗ್ಯ ಸೇರಿ ವಿವಿಧ ದೇಸಿ ಸಾಮಗ್ರಿ, ಪದಾರ್ಥ, ವಸ್ತುಗಳ ಮಾರಾಟ, ಪ್ರದರ್ಶನ ಜತೆಗೆ ಚಿಂತನ, ಮಂಥನ ನಡೆಯಲಿದೆ ಎಂದು ತಿಳಿಸಿದರು.