ಭಾರತೀಯ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿವೆ

5
Published on

ಮೈಸೂರು:ಭಾರತೀಯರ ಅನೇಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ವಿದೇಶಿ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಹೇಳಿದರು.


ಸುತ್ತೂರು ಮಠದಲ್ಲಿ ಶ್ರಾವಣ ಮಾಸದ 5ನೇ ದಿನದ ಅಂಗವಾಗಿ ಲಕ್ಕಣ್ಣ ದಂಡೇಶ ವಿರಚಿತ ಶಿವತತ್ವ ಚಿಂತಾಮಣಿ ಕುರಿತು ಪ್ರವಚನ ನೀಡಿದರು.
ಭಾರತೀಯರ ಎಲ್ಲ ಆಚರಣೆ, ಸಂಸ್ಕೃತಿಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಹೀಗಾಗಿಯೇ ಜನ್ಮ-ಪುನರ್ಜನ್ಮಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿ, ತಾರ್ಕಿಕ ನಿಲುವು ತಾಳಿದ್ದಾರೆ ಎಂದರು.


ಲಕ್ಕಣ್ಣ ದಂಡೇಶನು ಭಗವಂತ ಎಲ್ಲ ಕಡೆಯೂ ಇದ್ದಾನೆಂದು ಪ್ರತಿಪಾದಿಸಿದ್ದಾನೆ. ಭಗವಂತನ ವಿರಾಟ್ ರೂಪ ವರ್ಣಿಸಿದ್ದಾನೆ. ಸಪ್ತಸಾಗರಗಳೇ ಭಗವಂತನಿಗೆ ವಸ್ತ್ರ, ನಕ್ಷತ್ರ ಪುಂಜಗಳೇ ಆಭರಣ, ಕಾಲತ್ರಯಗಳಾದ ಭೂತ, ವರ್ತಮಾನ ಮತ್ತು ಭವಿಷ್ಯತ್‌ಗಳ ಮೇಲೆ ಸೃಷ್ಟಿ ನಿಂತಿದೆ. ಅದಕ್ಕೆ ನಾಶವೂ ಇದೆ ಎಂದು ಹೇಳಿದರು.


ಶರೀರದಲ್ಲಿ ಮೂರು ವಿಧಗಳು. ಸ್ಥೂಲ ಶರೀರ, ಇದು ಕಣ್ಣಿಗೆ ಕಾಣುತ್ತದೆ. ಸೂಕ್ಷ್ಮ ಶರೀರ, ಅಂದರೆ ಮನಸ್ಸು. ಇನ್ನೊಂದು ಕಾರಣ ಶರೀರ, ಅದು ಹುಟ್ಟು ಸಾವಿಗೆ ಕಾರಣವಾಗಿದೆ. ಆತ್ಮವು ವಿಶ್ವ ಸ್ವರೂಪಿಯಾಗಿದೆ ಎಂದರು. ವಿದ್ವಾನ್ ಕೃ. ರಾಮಚಂದ್ರ ಕಾವ್ಯ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net