ಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರ

11KMD-2
ಮಾಜಿ ಸಂಸದ ಡಾ. ಜಿ.ಮಾದೇಗೌಡ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
Published on

ಕೆ.ಎಂ.ದೊಡ್ಡಿ: ರೈತ ಹೋರಾಟಗಾರ, ಮಾಜಿ ಸಂಸದ ಡಾ.ಜಿ.ಮಾದೇಗೌಡ ಅವರ 96ನೇ ಹುಟ್ಟು ಹಬ್ಬದ ಅಂಗವಾಗಿ ಇಲ್ಲಿನ ಭಾರತೀ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಮಂಡ್ಯದ ಮಿಮ್ಸ್ ರಕ್ತದಾನ ಕೇಂದ್ರ, ರೆಡ್‌ಕ್ರಾಸ್ ಸಂಸ್ಥೆ ಮತ್ತು ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಈ ವೇಳೆ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರ ಚಿಕಿತ್ಸೆ ಒಳಪಟ್ಟವರಿಗೆ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಯಾವುದೇ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದು, ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.

ಆದರೆ ಅನೇಕ ಜನರು ರಕ್ತದಾನ ಮಾಡುವುದರಿಂದ ದುರ್ಬಲರಾಗುತ್ತೇವೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ. ಜತೆಗೆ ಬಿಪಿ, ಷುಗರ್ ಇತರ ಕಾಯಿಲೆಗಳಿಂದ ದೂರವಿರಬಹುದು. ರಕ್ತದಾನ ಮಾಡುವುದರಿಂದ ದೇಹಕ್ಕೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದು ಮಾಹಿತಿ ನೀಡಿದರು.

ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ನಾಗೇಂದ್ರ ಮಾತನಾಡಿ, ಕಳೆದ ವರ್ಷದಿಂದ ಮಾಜಿ ಸಂಸದ ಜಿ.ಮಾದೇಗೌಡರ ಸವಿ ನೆನಪಿಗಾಗಿ ಆರಂಭವಾದ ರಕ್ತದಾನ ಶಿಬಿರ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ರಕ್ತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ, ಪ್ರಾಂಶುಪಾಲರಾದ ಡಾ.ತಮಿಜ್ ಮಣಿ, ಡಾ.ಎಸ್.ಎಲ್.ಸುರೇಶ್, ಜಿ.ಕೃಷ್ಣ, ನಾಗಮಾದಯ್ಯ, ಹಿರಿಯ ಗ್ರಂಥಪಾಲಕ ಎ.ಎಸ್. ಸಂಜೀವ್, ಪ್ರಾಧ್ಯಾಪಕ ಸುಂದ್ರೇಶ್, ಹಿರಿಯ ಗ್ರಂಥಪಾಲಕ ಸಂಜೀವ್, ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನ, ಮಿಥುನ್, ನಿಖಿಲ್ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net