

ಬೀದರ್: ಯುವಕರು ಭಾರತಾಂಬೆ ಸೇವೆಗೆ ಸಿದ್ಧರಾಗಬೇಕು ಎಂದು ಬೀದರ್ ವಾಯುಪಡೆ ತರಬೇತಿ ಕೇಂದ್ರದ ಏರ್ ಆಫಿಸರ್ ಕಮಾಂಡಿಂಗ್ ಅಭಿಜೀತ್ ನೆನೆ ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ ಹಾಗೂ ಗ್ಲೊಬಲ್ ಸೈನಿಕ ಅಕಾಡೆಮಿ ವತಿಯಿಂದ ಇಲ್ಲಿಯ ಬೆನಕನಹಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಯ್ನೆಲದ ಸೇವೆ ಎಲ್ಲಕ್ಕಿಂತಲೂ ಶ್ರೇಷ್ಠವಾದದ್ದು. ಈ ಅವಕಾಶ ಗಿಟ್ಟಿಸಲೂ ಅದೃಷ್ಟ ಬೇಕು ಎಂದು ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳು ಇವೆ. ಈ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದ ಯುವಕ, ಯುವತಿಯರನ್ನು ಸಜ್ಜುಗೊಳಿಸಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಪ್ರಾಯೋಜಕತ್ವದಲ್ಲಿ ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಸೇನಾ ಭರ್ತಿ ತರಬೇತಿ ಶಿಸ್ತು ಹಾಗೂ ಸಂಯಮ ಕಲಿಸುತ್ತದೆ. ಸೇನೆಗೆ ಆಯ್ಕೆಯಾಗದಿದ್ದರೂ, ಜೀವನದಲ್ಲಿ ಬದಲಾವಣೆ ತರುತ್ತದೆ ಎಂದು ನುಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿಕಟಪೂರ್ವ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಸಂಘವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಮೂರನೇ ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರ ಇದಾಗಿದೆ. ಮೂರನೇ ತಂಡದಲ್ಲಿ 225 ಅಭ್ಯರ್ಥಿಗಳ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈವರೆಗೆ ತರಬೇತಿ ಪಡೆದ ನೂರಾರು ಅಭ್ಯರ್ಥಿಗಳು ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಗ್ಲೊಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ನೇತೃತ್ವದಲ್ಲಿ ಈ ಭಾಗದಲ್ಲಿ ಸೇನೆಯಲ್ಲಿ ಇರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಯುವಕರಲ್ಲಿ ದೇಶಾಭಿಮಾನ ಜಾಗೃತಗೊಳಿಸಲಾಗಿದೆ ಎಂದು ಹೇಳಿದರು.
ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರ ಯುವಕರಿಗೆ ಬಹಳ ಉಪಯುಕ್ತ ಆಗಿರುವ ಕಾರಣ ಬರುವ ದಿನಗಳಲ್ಲಿ ವಿಕಾಸ ಅಕಾಡೆಮಿ, ಗ್ಲೊಬಲ್ ಸೈನಿಕ ಅಕಾಡೆಮಿ, ಗಣ್ಯರು ಹಾಗೂ ದಾನಿಗಳ ಸಹಯೋಗದಲ್ಲಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಶರಣಪ್ಪ ಸಿಕೇನಪುರ ಮಾತನಾಡಿದರು. ಎಸಿಯಾಡ್ ಮತ್ತು ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ರೈಫಲ್ ಶೂಟಿಂಗ್‍ನಲ್ಲಿ ಚಿನ್ನದ ಪದಕ ವಿಜೇತ, ಒಂದೂವರೆ ತಿಂಗಳು ಶಿಬಿರದಲ್ಲಿ ಉಳಿದುಕೊಂಡು ಅಭ್ಯರ್ಥಿಗಳಿಗೆ ತರಬೇತಿ ನೀಡಿದ ನಿವೃತ್ತ ಕ್ಯಾಪ್ಟನ್ ಟಿ.ಸಿ. ಪಲಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಗ್ಲೊಬಲ್ ಸೈನಿಕ ಅಕಾಡೆಮಿ ನಿರ್ದೇಶಕ ಡಾ. ಶರಣ ಬುಳ್ಳಾ, ಸುಬೇದಾರ್‍ಗಳಾದ ಮಡೆಪ್ಪ, ರಾಮ, ಜೈಪ್ರಕಾಶ, ಸಾಹೇಬ ಸುಬೇದಾರ್ ಧನರಾಜ ಸಾವರೆ ಇದ್ದರು.
ಗ್ಲೊಬಲ್ ಸೈನಿಕ ಅಕಾಡೆಮಿಯ ಕಾರಂಜಿ ಸ್ವಾಮಿ ನಿರೂಪಿಸಿದರು. ವಿಲ್ಸನ್ ಸ್ವಾಗತಿಸಿದರು. ರಜನಿ ಉನ್ನಿಕೃಷ್ಣ ವಂದಿಸಿದರು.