ಬಳ್ಳಾರಿ : ವಿಶ್ವದಲ್ಲಿನ 196 ರಾಷ್ಟ್ರಗಳಲ್ಲಿ ಭಾರತವು ಸದೃಢ ಪ್ರಜಾಪ್ರಭುತ್ವವನ್ನು ಹೊಂದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ಈ. ತುಕಾರಾಮ್ ಹೇಳಿದರು.
ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂಬರುವ ಪೀಳಿಗೆಯ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪ್ರತಿಯೊಬ್ಬರೂ ಸಹೃದಯದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ, ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರಚಿಸಲು ಭಾರತದ ಪ್ರಜೆಗಳಾದ ನಾವು ನಮ್ಮ ಸಾಧನೆ ಮತ್ತು ಜವಾಬ್ದಾರಿಗಳನ್ನು ತುಲನೆ ಮಾಡಿಕೊಂಡು, ಸುಭದ್ರ ದೇಶ ಕಟ್ಟುವಲ್ಲಿ ಯೋಚನೆ ಹಾಗೂ ಯೋಜನೆಗಳ ಕುರಿತು ಅವಲೋಕನ ಮಾಡಬೇಕು ಎಂದು ತಿಳಿಸಿದರು.
ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ರಾಜ್ಯ ಸರ್ಕಾರ ವಿಶಿಷ್ಟವಾಗಿ ಆಚರಿಸುತ್ತಲಿದ್ದು, ಏಕತೆ-ಸಮಾನತೆ ಸಾರವನ್ನು ಸಾರುವುದ್ದಕ್ಕಾಗಿ ಬೃಹತ್ ಮಾನವ ಸರಪಳಿ ಆಯೋಜಿಸಲಾಗಿದೆ ಎಂದರು.
ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮುಂಬರುವ ದಿನಗಳಲ್ಲಿ ಸಮಾಜದ ಉತ್ತಮ ಜನಪ್ರತಿನಿಧಿ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಮಲ್ಲಿಕಾರ್ಜುನ ಮಾತನಾಡಿದರು.
ಬಾಕ್ಸ್ : ಜಿಲ್ಲೆಯಲ್ಲಿ 32 ಸಾವಿರ ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ 45 ಕಿ.ಮಿ ಉದ್ದದ ಮಾನವ ಸರಪಳಿ ನಿರ್ಮಿಸಿ, 2 ಸಾವಿರ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ 100 ಮೀಟರ್ ಉದ್ದದ 10 ರಾಷ್ಟ್ರದ್ವಜಗಳನ್ನು ವಿದ್ಯಾರ್ಥಿಗಳು ಹಿಡಿದೂ ದೇಶಪ್ರೇಮ ಮೆರೆದರು.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಬಳ್ಳಾರಿ” ಎನ್ನುವ ಅಕ್ಷರ ವಿನ್ಯಾಸವು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಕಲರವವು ಹಬ್ಬದ ವಾತಾವರಣ ಸೃಷ್ಠಿಸಿ, ನೆರೆದಿದ್ದವರು ಮನಸೂರೆಗೊಂಡರು