ಭಾರತವನ್ನು ವಿಶ್ವ ಗುರುವಾಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಲಿ: ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ

mysore
Published on

ಮೈಸೂರು: ಭಾರತವು ವಿಶ್ವ ಗುರು ಸಂಕಲ್ಪ ಸಾಧನೆ ಒಬ್ಬರಿಂದ ಸಾಧ್ಯವಿಲ್ಲ. ಇದನ್ನು ಸಾಧಿಸಲು ಪ್ರತಿಯೊಬ್ಬ ಭಾರತೀಯರೂ ಕೈಜೋಡಿಸಬೇಕು ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಗುರುವಾರ ಆಯೋಜಿಸಿದ್ದ ಭಜನಾ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತವು ವಿಶ್ವ ಗುರು ಗುರಿಯ ಕುರಿತು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳಲಾಗುತ್ತದೆ. ಇದು ಒಬ್ಬರಿಂದ, ಸಂಸ್ಥೆ, ಮಠದಿಂದ ಆಗಲ್ಲ. ಸಮಾಜದ ಸುಶಿಕ್ಷಿತರು, ಸಜ್ಜನರು ಸಕ್ರಿಯವಾಗಬೇಕು ಎಂದರು.

ಇದೀಗ ಜಗತ್ತಿನ ಎಲ್ಲೆಡೆ ಯುದ್ಧ ಸಂಕ್ರಮಣ ಸೃಷ್ಟಿಯಾಗಿದೆ. ವೈರತ್ವ, ಮತ್ಸರದಿಂದ ಅನೇಕ ಬವಣೆಗಳಿಂದ ಬಳಲುವಂತಾಗಿದೆ. ಸ್ವಾರ್ಥ, ಅಸತ್ಯ ವಿಜೃಂಭಿಸುತ್ತಿದೆ. ಮನುಕುಲದಲ್ಲಿ ದೈವತ್ವಕ್ಕಿಂತ ರಾಕ್ಷಸಿ ಸ್ವಭಾವ ಅಧಿಕವಾಗಿದೆ. ಹೀಗೆ ಇಡೀ ಜಗತ್ತು ಅಂಧಕಾರದಲ್ಲಿ ಕಳೆದುಹೋಗುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರಪಂಚಕ್ಕೆ ದೀಪಸ್ತಂಭವಾಗಿರುವ ಭಾರತವೇ ಬೆಳಕಾಗಬೇಕಿದೆ ಎಂದರು.

ಆಧ್ಯಾತ್ಮಿಕತೆ, ಧರ್ಮ, ಸ್ನೇಹ, ಬಾಂಧವ್ಯದ ಬೆಳಕು ಹರಿಸುವುದರೊಂದಿಗೆ ಮನುಕುಲ ಉಳಿಸುವ ಕೆಲಸವನ್ನು ಭಾರತ ಮಾಡಬೇಕು. ಇಡೀ ಜಗತ್ತಿನ ಏಳ್ಗೆಗೆ, ಕಲ್ಯಾಣಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಬೇಕಿದೆ. ಭಾರತಕ್ಕೆ ಇಂತಹ ವಿಶಿಷ್ಟ ಭೂಮಿಕೆಯ ಮಹತ್ವದ ಕರ್ತವ್ಯ ಇದೆ. ಅದನ್ನು ನಿರ್ವಹಿಸಬೇಕಿದೆ ಎಂದರು.

ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಜಾತ್ರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆಯೂ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಮಠಮಾನ್ಯ, ಹರ-ಚರ-ಗುರುಮೂರ್ತಿಗಳು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಆಧುನಿಕವಾಗಿ ನಾವುಗಳು ಎಷ್ಟೇ ಮುಂದುವರಿದಿದ್ದರೂ ಧಾರ್ಮಿಕತೆ, ಸಂಸ್ಕೃತಿ, ಪರಂಪರೆಯಲ್ಲಿ ಹಿಂದೆ ಬೀಳಬಾರದು. ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಠಗಳು, ಅವುಗಳನ್ನು ನಡೆಸುವ ಸ್ವಾಮೀಜಿಗಳು ಮಾಡಿಕೊಂಡು ಬಂದಿದ್ದಾರೆ. ಅದರ ದ್ಯೋತಕವೇ ಈ ಸುತ್ತೂರು ಜಾತ್ರೆ ಎಂದರು.

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಹಸ್ರಾರು ಜನರು ಭೇಟಿ ನೀಡಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಶ್ರದ್ಧಾಭಕ್ತಿಯನ್ನು ಮೆರೆಯುತ್ತಿದ್ದಾರೆ. ಈಗಿನ ಕಾಲದಲ್ಲೂ ಧಾರ್ಮಿಕತೆ ಉಳಿದಿರುವುದಕ್ಕೆ ಇದುವೇ ಸಾಕ್ಷಿ ಎಂದರು.

ಸುತ್ತೂರು ಜಾತ್ರೆ ಆಡಂಬರ ಮತ್ತು ಸಂಭ್ರಮಕ್ಕೆ ಅಷ್ಟೇ ಸೀಮಿತವಲ್ಲ. ಇದು ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಜಾತ್ರೆ. ಜತೆಗೆ, ಕೃಷಿ, ರೈತರಿಗೆ, ಗುಡಿ ಕೈಗಾರಿಕೆ ಪ್ರೋತ್ಸಾಹ ಕೊಡಲಾಗುತ್ತಿದ್ದು, ಈ ಕುರಿತು ಜನರಿಗೂ ಅರಿವು ಮೂಡಿಸುತ್ತಿರುವುದು ಉತ್ತಮ ಕಾಯಕ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಡಿ ಕೈಗಾರಿಕೆ, ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆಗೆ ಉತ್ತೇಜನ ಕೊಟ್ಟಿದ್ದಾರೆ. 2047ರ ಹೊತ್ತಿಗೆ ದೇಶವು ‘ಅಭಿವೃದ್ಧಿ ಹೊಂದಿದ ಭಾರತ’ ಆಗಬೇಕು ಎಂಬ ಸಂಕಲ್ಪ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಣಕವಾಡಿಯ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net