

ಕಲಬುರಗಿ: ಪ್ರಪಂಚದಲ್ಲೇ ಭರತಖಂಡ ಪುಣ್ಯದ ಭೂಮಿಯಾಗಿದ್ದು, ಸಮಸ್ತ ಮನುಕುಲದ ಒಳಿತು ಬಯಸುವ ಇಲ್ಲಿನ ಸದ್ಭಾವನೆ, ಚಿಂತನೆ, ಆಧ್ಯಾತ್ಮ ಮತ್ತು ಸಂಸ್ಕೃತಿ, ಸಂಸ್ಕಾರ ವಿಶ್ವಕ್ಕೆ ಪ್ರೇರಣೆ ಎಂದು ಬೀದರ್ ಚಿದಂಬರ ಆಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಬಣ್ಣಿಸಿದರು.
ತಾಜಸುಲ್ತಾನಪುರದ ಚಿನ್ನದಕಂತಿ ಶ್ರೀ ಚಿಕ್ಕವೀರೇಶ್ವರ ಹಿರೇಮಠದಲ್ಲಿ ಪೀಠಾಧಿಪತಿ ಶ್ರೀ ಡಾ.ರೇವಣಸಿದ್ದ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭದಲ್ಲಿ ಶ್ರೀಮಠದ ಪ್ರತಿಷ್ಠಿತ ಚಿನ್ನದ ಕಂತಿ ಪ್ರಶಸ್ತಿ ಸ್ವೀಕರಿಸಿ ಆಶೀರ್ವಚನ ನೀಡಿ, ನಮ್ಮಲ್ಲಿನ ಋಷಿ ಮುನಿಗಳು, ಯತಿಗಳು, ಆಧ್ಯಾತ್ಮ ಸಾಧಕರು ವೇದ, ಆಗಮ, ಉಪನಿಷತ್ತುಗಳಲ್ಲಿ ಜಗತ್ತಿಗೆ ಸಕಾರಾತ್ಮಕ ಸಂದೇಶ ಸಾರಿದ್ದಾರೆ ಎಂದರು.
ನಮ್ಮ ಗ್ರಂಥಗಳಲ್ಲಿ ಪ್ರತಿ ಮನುಷ್ಯ ನೆಮ್ಮದಿಯಿಂದ ಬದುಕು ಸಾಧಿಸುವ ದಾರಿಗಳಿವೆ. ಆದ್ದರಿಂದಲೇ ವೇದಗಳು, ಅಧ್ಯಾತ್ಮದ ಕುರಿತು ಹೆಚ್ಚಿನ ಆಸಕ್ತಿ ವಿದೇಶಿಗರು ತೋರಿಸುತ್ತಿದ್ದಾರೆ. ವೈಭವ ಮತ್ತು ವೈರಾಗ್ಯ ಭರತಖಂಡದಲ್ಲಿ ಮಾತ್ರ ಕಾಣಲು ಸಾಧ್ಯ. ಮಠ-ಮಂದಿರಗಳು, ಅಧ್ಯಾತ್ಮ ಕೇಂದ್ರಗಳು ಜನರ ಬದುಕು ಹಸನು ಮಾಡಲು ಹಗಲಿರುಳು ಶ್ರಮವಹಿಸುತ್ತಿವೆ ಎಂದು ಹೇಳಿದರು.
ಪೀಠಾಧಿಪತಿ ಶ್ರೀ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಬೀದರ್ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಧ್ಯಾತ್ಮ ಮತ್ತು ಸಮಾಜ ಸೇವೆ ಗುರುತಿಸಿ ಚಿನ್ನದಕಂತಿ ಪ್ರಶಸ್ತಿ ನೀಡಲಾಗಿದೆ. ಅಧ್ಯಾತ್ಮ ಕ್ಷೇತ್ರದ ಇಂದಿನ ಯುವ ಯತಿಗಳಿಗೆ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ಪ್ರೇರಣೆ ಎಂದು ನುಡಿದರು.
ನಾಡಿನ ವೀರಶೈವ ಲಿಂಗಾಯತ ಮಠಮಾನ್ಯಗಳು ಶತಶತಮಾನಗಳಿಂದ ಆಧ್ಯಾತ್ಮ ಬೋಧನೆಯೊಂದಿಗೆ ಅನ್ನ, ಅಕ್ಷರ, ಆಶ್ರಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಶ್ರಮಿಸುತ್ತಿವೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ನುಡಿದರು.
ಉಭಯ ಪೂಜ್ಯರಿಗೆ ಭಕ್ತರಿಂದ ತುಲಾಭಾರ ನೆರವೇರಿತು. ಹರಸೂರ ಕಲ್ಮಠದ ಶ್ರೀ ಕರಿಬಸವ ಶಿವಾಚಾರ್ಯರು, ಕಪನೂರದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಂಸದ ಡಾ.ಉಮೇಶ ಜಾಧವ್, ಕಲ್ಯಾಣಪ್ಪ ಬುಜುರ್ಕೆ, ಬಿ.ಎಚ್.ನಿರಗುಡಿ ಇತರರಿದ್ದರು. ಹಣಮಂತ್ರಾಯ ಅಟ್ಟೂರ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ಪ್ರಾಸ್ತಾವಿಕ ಮಾತನಾಡಿದರು. ರವಿ ಶಹಾಪೂರಕರ ನಿರೂಪಣೆ ಮಾಡಿದರು. ಗುರು ಹಾಂವಾ ವಂದಿಸಿದರು.