‘ಭಾರತದ ಪ್ರಜೆಗಳಾದ ನಾವು’ ಚಲನಚಿತ್ರಕ್ಕೆ ಪ್ರಶಸ್ತಿ

film 1
Published on

ಮೈಸೂರು: ‘ಭಾರತದ ಪ್ರಜೆಗಳಾದ ನಾವು’ ಚಲನಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಚಲನಚಿತ್ರ ಎಂಬ ಪ್ರಶಸ್ತಿ ದೊರೆತಿದೆ ಎಂದು ಚಿತ್ರದ ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ತಿಳಿಸಿದರು.

ಸ್ಥಳೀಯ ಕಲಾವಿದರೇ ಇರುವ ಈ ಚಿತ್ರವನ್ನು ಮೈಸೂರು ಸುತ್ತಮುತ್ತ ಚಿತ್ರಿಸಲಾಗಿದೆ. ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರೆತಿದೆ. ಇದರಿಂದಾಗಿ ಮೈಸೂರು-ಚಾಮರಾಜನಗರ ಭಾಗಕ್ಕೆ ಉತ್ತಮ ಗೌರವ ದೊರೆತಂತಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿನಿಮಾದಲ್ಲಿ ನಾಲ್ಕು ಹೋರಾಟ ಗೀತೆಗಳಿವೆ. ಸುಮಾರು 50 ಲಕ್ಷ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲಾಗಿದೆ. ಇಂತಹ ಚಿತ್ರಗಳನ್ನು ಬೆಂಬಲಿಸುವ ಮನಸ್ಥಿತಿಯವರು ರಾಜ್ಯದಲ್ಲಿ ಕಡಿಮೆ. ಆದರೆ, ತಮಿಳುನಾಡಿನಲ್ಲಿ ಇಂತಹ ಚಿತ್ರ ನಿರ್ಮಾಣವಾದರೆ ಸ್ಟಾರ್‌ಗಳೂ ವೀಕ್ಷಿಸಿ, ಒಂದಷ್ಟು ಒಳ್ಳೆಯ ಮಾತನ್ನಾಡುತ್ತಾರೆ. ಇದರಿಂದಾಗಿ ಅವರ ಅಭಿಮಾನಿಗಳೂ ಸಿನಿಮಾ ನೋಡುತ್ತಾರೆ. ಈ ಪ್ರವೃತ್ತಿ ಇಲ್ಲಿಯೂ ಬೆಳೆಯಬೇಕು ಎಂದು ಹೇಳಿದರು.

ಸಂವಿಧಾನ ಪೀಠಿಕೆ ಅಡಿಯಲ್ಲಿ ಎಲ್ಲರೂ ಭ್ರಾತೃತ್ವ, ಸಮಾನತೆಗಳ ಶಪಥ ಮಾಡುತ್ತೇವೆ. ಆದರೆ ಜಾತಿ, ಧರ್ಮದ ನೆಲೆಯಲ್ಲೇ ಇವುಗಳ ಪಾಲನೆ ಮಾಡುವುದಿಲ್ಲ.

ಸಂಘರ್ಷಕ್ಕೆ ಎಡೆ ಮಾಡದೆ ಇವುಗಳನ್ನು ಹೇಗೆ ಸ್ಥಾಪಿಸಬಹುದೆಂಬ ಆಶಯವನ್ನು ಸಿನಿಮಾ ಹೊಂದಿದೆ. ಜಾತಿ, ಧರ್ಮದ ಹೆಸರಿನಲ್ಲಿ ಹಕ್ಕುಗಳನ್ನು ಕಸಿಯುತ್ತಿದ್ದು, ಇವುಗಳನ್ನು ಪ್ರಯತ್ನಿಸಿದರೆ ಹೇಗೆ ದೊರಕಿಸಿಕೊಡಬಹುದು ಎಂಬ ಸಂದೇಶ ಚಿತ್ರದಲ್ಲಿದೆ ಎಂದರು.

ನೆಲೆ ಹಿನ್ನೆಲೆ ಸಂಘಟನೆಯ ಗೋಪಾಲಕೃಷ್ಣ, ಸತೀಶ್ ಪೊನ್ನಾಚಿ, ಶಿವಾಜಿ, ಮಹದೇವಮೂರ್ತಿ, ಪುಷ್ಪಲತಾ, ಸುಪ್ರೀತ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net