ಭಾರತದ ಪರಂಪರೆ ಪರಿಚಯಿಸಿದ ಉತ್ಸವ, ಜಾನಪದ ಹಾಡಿಗೆ ಕೇಕೇ ಹಾಕಿದ ಜನರು

h13- Tamilnadu
Published on

ಧಾರವಾಡ: ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಇನ್ನಷ್ಟು ಮೆರಗು ನೀಡುವಂತಿರುವ ರಾಷ್ಟ್ರೀಯ ಯುವಜನೋತ್ಸವ ಕಲಾಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಐದು ದಿನಗಳ ಉತ್ಸವ ನಗರದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದ್ದರೂ ಎಲ್ಲ ಕಡೆಗಳಲ್ಲಿ ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತಿವೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಗ್ರೀನ್ ಗಾರ್ಡನ್​ನಲ್ಲಿ ಶುಕ್ರವಾರ ಬೆಳಗ್ಗೆ ಅಯೋಜಿಸಲಾಗಿದ್ದ ಯುವ ಕಲಾವಿದರ ಶಿಬಿರದಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳ ಕಲೆ ಅನಾವರಣಗೊಂಡಿತು. ಪೇಂಟಿಂಗ್, ಮಣ್ಣಿನಿಂದ ಮೂರ್ತಿ ತಯಾರಿ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಹಸಿರು ಉದ್ಯಾನದ ತುಂಬೆಲ್ಲ ಕುಳಿತು ಕಲಾವಿದರು ಚಿತ್ರಗಳನ್ನು ಬಿಡಿಸಿ ವೈವಿದ್ಯಮಯ ಬಣ್ಣ ತುಂಬಿದರು.

ಕಲಾ ಶಿಬಿರವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಯುವಕರಲ್ಲಿದೆ. ದೇಶದ ಅಭಿವೃದ್ಧಿ ಯುವಕರ ಜವಾಬ್ದಾರಿ ಕೂಡ ಆಗಿದೆ. ಯುವಜನೋತ್ಸವದ ಮೂಲಕ ಇಡೀ ಭಾರತವನ್ನು ಒಂದೇ ಸ್ಥಳದಲ್ಲಿ ನೋಡುವ ಭಾಗ್ಯ ನಮಗೆಲ್ಲ ಸಿಕ್ಕಿದೆ ಎಂದರು.

ಕವಿವಿ ಕುಲಪತಿ ಪೊ›. ಕೆ.ಬಿ. ಗುಡಸಿ ಮಾತನಾಡಿ, ದೇಶದ ವಿವಿಧೆಡೆಯಿಂದ ಬಂದಿರುವ ವಿದ್ಯಾರ್ಥಿಗಳು ಇಲ್ಲಿನ ವಾತಾವರಣ ಹಾಗೂ ಕ್ಯಾಂಪಸ್​ನ್ನು ಆಸ್ವಾಧಿಸುತ್ತ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಸಲಹೆ ನೀಡಿದರು.

ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಶ್ರೀಕಾಂತ ಪಾಂಡೆ ಪ್ರಾಸ್ತಾವಿಕ ಮಾತನಾಡಿ, ಯುವಜನ ಮೇಳದಲ್ಲಿ ಮೊದಲ ಬಾರಿಗೆ ಸ್ಥಳೀಯ ಕಲಾವಿದರಿಗೆ ರಾಷ್ಟ್ರೀಯ ಮಟ್ಟದ ಕಲಾವಿದರ ಜತೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸುಜಾತಾ ಕಾಳೆ, ಪೊ›. ಸಂಗೀತಾ ಮಾನೆ, ದೇವೇಂದ್ರ ಕುಮಾರ ಹಾಜರಿದ್ದರು. ಕಲ್ಪವೃಕ್ಷಾ ಮತ್ತು ಚಿತ್ರಾ ನಿರೂಪಿಸಿದರು. ಪೊ›. ಅನೀತಾ ವಂದಿಸಿದರು.

ಇಂಪು ನೀಡಿದ ಜಾನಪದ ಹಾಡು: ಧಾರವಾಡ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ನಡೆದ ಜಾನಪದ ಹಾಡು ಸ್ಪರ್ಧೆಯು ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಉತ್ತರಾಖಂಡ, ತಮಿಳುನಾಡು, ಪಂಜಾಬ, ಅರುಣಾಚಲ ಪ್ರದೇಶ, ಛತ್ತಿಸಗಡ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣ ಮಾಡಿದರು.

ತಮ್ಮ ರಾಜ್ಯದ ಬುಡಕಟ್ಟು ಸಮುದಾಯ, ಜನಪದರು ಬಳಸುವ ವೇಷಭೂಷಣ ಧರಿಸಿದ್ದ ಕಲಾವಿದರು, ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಗಮನ ಸೆಳೆದರು.

ತಮಿಳುನಾಡಿನ ಬುಡಕಟ್ಟು ಜನಾಂಗದವರ ವಾದ್ಯ ಪಂಬೈ, ಶಹನಾಯಿ, ಉತ್ತರಾಖಂಡದ ಕೊಳಲು, ಪಂಜಾಬಿನ ತುಂಬಿ ಏಕತಾರಾ ಮುಂತಾದ ವಾದ್ಯಗಳು ಕೇಳುಗರ ಮನಸೂರೆಗೊಂಡವು. ಈ ಮೂಲಕ ಆಯಾ ರಾಜ್ಯದ ಪ್ರಮುಖ ವಾದ್ಯಗಳು, ವೇಷಭೂಷಣದ ಪರಿಚಯವೂ ಆಯಿತು.

ಜಾನಪದ ಹಾಡು ಸ್ಪರ್ಧೆ ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ದೇಶದ ವಿವಿಧ ಸಂಸ್ಕೃತಿಗಳ ಪರಸ್ಪರ ಅರಿಯುವಿಕೆಯಿಂದ ಯುವಜನ ಮೇಳದಂತಹ ಕಾರ್ಯಕ್ರಮಗಳು ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಕುಲಪತಿ ಪೊ›. ಕೆ.ಬಿ. ಗುಡಿಸಿ, ಕುಲಸಚಿವ ಯಶಪಾಲ್ ಕ್ಷೀರಸಾಗರ, ಮೌಲ್ಯಮಾಪನ ಕುಲಸಚಿವ ಪೊ›. ಸಿ. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಜರಿದ್ದರು.

ಸುರೇಂದ್ರ ಸೈನಿ ಸ್ವಾಗತಿಸಿದರು, ನಿತ್ಯಾನಂದ ಯಾದವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net