ಭಾರತದ ಕುಟುಂಬ ಪದ್ಧತಿ ಅದ್ಭುತ

h9-Jabin 2
Published on

ಹುಬ್ಬಳ್ಳಿ: ದಕ್ಷಿಣ ಆಫ್ರಿಕಾ, ಯೂರೋಪ್ ಮತ್ತಿತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಕುಟುಂಬ ಪದ್ಧತಿ ಅದ್ಭುತವಾಗಿದೆ ಎಂದು ಆಕಾಶವಾಣಿ ಬೆಂಗಳೂರು ವಲಯ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ವಿದ್ಯಾನಗರದ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘21ನೇ ಶತಮಾನದಲ್ಲಿ ಮಹಿಳೆಯರ ಸಮಾನತೆ ಮತ್ತು ಹಕ್ಕುಗಳು’ ಕುರಿತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿರು. ದಕ್ಷಿಣ ಆಫ್ರಿಕಾದ ಸಮಾವೇಶವೊಂದಕ್ಕೆ ತೆರಳಿದ್ದಾಗ ಅಲ್ಲಿನ ಮಹಿಳೆಯರ ಶೋಷಣೆಯ ಅರಿವಾಯಿತು. ಅಲ್ಲಿಗೆ ಬಂದಿದ್ದ ಜರ್ಮನ್ ಮಹಿಳೆಯೊಬ್ಬಳು ನಮ್ಮ ದೇಶದ ಕುಟುಂಬ ಪದ್ಧತಿ ಕುರಿತು ಕೇಳಿ ಆಶ್ಚರ್ಯಪಟ್ಟಿದ್ದಳು. ಅಂತಹ ಅದ್ಭುತ ಸಂಸ್ಕೃತಿ ವ್ಯವಸ್ಥೆ ನಮ್ಮದು ಎಂದರು.

ಮಕ್ಕಳು ಯಶಸ್ಸು ಗಳಿಸಿದರೆ ತಂದೆ ಕಾರಣ ಎನ್ನುತ್ತಾರೆ. ಮಕ್ಕಳು ಹಾಳಾದರೆ ತಾಯಿ ಕಾರಣ ಎನ್ನುತ್ತಾರೆ. ಎಲ್ಲ ಜವಾಬ್ದಾರಿಗಳನ್ನು ಮಹಿಳೆಯೇ ಏಕೆ ಹೊರಬೇಕು? ಪುರುಷರೂ ಸಮಾನವಾಗಿ ಕುಟುಂಬ, ಮಕ್ಕಳ ಜವಾಬ್ದಾರಿ ಹೊರಬೇಕು ಎಂದರು.

ಪ್ರಾಚಾರ್ಯ ಡಾ. ಎಸ್.ವಿ. ಹಿರೇಮಠ ಮಾತನಾಡಿ, 2020ರ ಆಧುನಿಕ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ನೆಪದಲ್ಲಿ ಭಾರತೀಯ ಮೂಲ ಸಂಸ್ಕೃತಿ ಮರೆಯುತ್ತಿದ್ದಾರೆ. ಹೆತ್ತ ಮಕ್ಕಳಿಗೆ ಎರಡಕ್ಷರ ಕಲಿಸುವ ವ್ಯವಧಾನವೂ ಅನೇಕರಿಗೆ ಇಲ್ಲದಾಗಿದೆ. ಮೊಬೈಲ್, ಟಿವಿಯಲ್ಲಿ ಮುಳಗಿರುವ ಆಕೆ ಪಿಜ್ಜಾ, ಬರ್ಗರ್ ಆರ್ಡರ್ ಮಾಡಿ ಮಕ್ಕಳನ್ನು ಅಪೌಷ್ಟಿಕತೆಯತ್ತ ದೂಡುತ್ತಿದ್ದಾಳೆ. ನಾವು ಎಷ್ಟೇ ಮುಂದುವರಿದರೂ ಮೂಲ ಸಂಸ್ಕೃತಿ ಮರೆಯ ಬಾರದು. ಮಕ್ಕಳಿಗೆ ಆಚಾರ, ವಿಚಾರ, ಸಂಸ್ಕಾರ, ಸಂಪ್ರದಾಯಗಳನ್ನು ಹೇಳಿಕೊಡಬೇಕು ಎಂದರು.

ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ಪಾಟೀಲ, ಡಾ. ನಿರ್ಮಲಾ ಯಲಿಗಾರ ಹಾಗೂ ವಿಶ್ವದಾಖಲೆಯ ಸ್ಕೇಟಿಂಗ್ ಪಟು ಓಜಲ್ ನಲವಡಿ ಅವರನ್ನು ಸನ್ಮಾನಿಸಲಾಯಿತು. ಸುಮಂಗಲಾ ಪಾಟೀಲ, ರೇವತಿ ಪೂಂಜ, ಭಾಗ್ಯಜ್ಯೋತಿ ಹಿರೇಮಠ, ಅಶ್ವಿನಿ ಟೆಂಗಿನಕಾಯಿ, ಎಸ್.ಎಂ. ಪಾಟೀಲ, ರಜನಿ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net