

ಚಿತ್ರದುರ್ಗ: ಭಾರತೀಯರ ಉಡುಗೆ-ತೊಡುಗೆ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಸಾಹಿತ್ಯಿಕ-ಧಾರ್ಮಿಕ ಪರಂಪರೆ ಭಿನ್ನವಾದರೂ ವಿವಿಧತೆಯಲ್ಲಿದೆ ಭಕ್ತಿ. ದೇಶಕ್ಕೆ ಅದುವೇ ಏಕತೆಯ ಶಕ್ತಿ ಎಂಬುದನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯಾಗಿದ್ದು, ರಾಷ್ಟ್ರಪ್ರೇಮ ಬಿಂಬಿಸುವ ನೃತ್ಯ ರೂಪಕಗಳು...
ಸರ್ಕಾರಿ ವಿಜ್ಞಾನ ಕಾಲೇಜು ಸಮೀಪದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸಿದ ವಿದ್ಯಾರ್ಥಿ ಸಮೂಹ ದೇಶಭಕ್ತಿಯ ಸಂದೇಶ ಸಾರಿದರು.
ಕೇಸರಿ-ಬಿಳಿ-ಹಸಿರು ತ್ರಿವರ್ಣ ಮಾದರಿಯ ವೇಷಭೂಷಣದೊಂದಿಗೆ ಮೈದಾನ ಪ್ರವೇಶಿಸಿದ ನೂರಾರು ವಿದ್ಯಾರ್ಥಿಗಳು ರಾಷ್ಟ್ರಭಕ್ತಿಯ ಸಿಂಚನವನ್ನೇ ಸೃಷ್ಟಿಸಿದರು. ಒಂದು ತಾಸು ಪ್ರೇಕ್ಷಕರ ಉಬ್ಬೇರುವಂತೆ ಮಾಡಿದರು. ಪ್ರತಿ ರೂಪಕವೂ ನೋಡುಗರನ್ನು ಹಿಡಿದಿಟ್ಟುಕೊಂಡು ಮೌನಕ್ಕೆ ಜಾರಿಸಿತು. ಕೊನೆಯಲ್ಲಿ ಚಪ್ಪಾಳೆಗಳ ಸುರಿಮಳೆಯೊಂದಿಗೆ ಮೆಚ್ಚುಗೆ ವ್ಯಕ್ತವಾದವು.
ನ್ಯಾಷನಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಮೂಡಿಸುವ ಹಿಂದಿ ಸಿನಿಮಾ ಗೀತೆಗಳಿಗೆ ಹೆಜ್ಜೆ ಹಾಕಿದರು. ಸೇನಾನಿಗಳು ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ, ವಿಜಯ ತಂದುಕೊಟ್ಟು ಪ್ರಾಣತ್ಯಾಗ ಮಾಡಿದ ಸನ್ನಿವೇಶ ಕೆಲವರ ಕಣ್ಣಾಲೆ ಒದ್ದೆಯಾಗಿಸಿತು.
ಬಾಲ್ಯ ವಿವಾಹ, ಬಾಲ ಕಾರ್ಮಿಕ, ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ಭಯಾನಕ ಆ್ಯಸಿಡ್ ದಾಳಿ ಹೀಗೆ.. ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು ಕೈಜೋಡಿಸುವಂತೆ ಜಾಗೃತಿ ಮೂಡಿಸಿದರು. ಕೊನೆಯಲ್ಲಿ ಕನ್ನಡದ ಸಲಾಂ ಸೋಲ್ಜರ್ ಗೀತೆಯೊಂದಿಗೆ 20 ನಿಮಿಷ ಪ್ರಸ್ತುತ ಪಡಿಸಿದ ರೂಪಕ ನೆರೆದಿದ್ದವರ ಗಮನ ಸೆಳೆಯಿತು.
ಪಿಯೂಷ್ ಪಾಂಡೆ ಸಾಹಿತ್ಯದ, ಪಂಡಿತ್ ಭೀಮಸೇನ ಗುರುರಾಜ್ ಜೋಶಿ ಸಂಯೋಜನೆಯ ಮಿಲೇ ಸುರು ಮೇರಾ ತುಮ್ಹಾರಾ ಹಾಡಿಗೆ ಡಾನ್ ಬಾಸ್ಕೋ ಪಿಯು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅತ್ಯದ್ಭುತವಾಗಿ ನೃತ್ಯ ಪ್ರಸ್ತುತ ಪಡಿಸಿ, ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಭೌತಿಕ, ಸಾಂಸ್ಕೃತಿಕ, ಭಾಷಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೈದ್ಧಾಂತಿಕ ನಿಲುವುಗಳು ನಮ್ಮಲ್ಲಿ ಬೇರೆಯಾಗಿದ್ದರೂ ಸಾಮರಸ್ಯವಾಗಿ ಬದುಕುವ, ವೈವಿಧ್ಯತೆಯಲ್ಲೂ ಏಕತೆ ಇದೆ ಎಂಬುದಕ್ಕೆ ಈ ನೃತ್ಯರೂಪಕ ಸಾಕ್ಷಿಯಾಯಿತು.
ಎಸ್‌ಆರ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹೊರಹೊಮ್ಮಿದ ನಮ್ಮ ಭಾರತ ಶ್ರೇಷ್ಠ ಭಾರತ ಎಂಬ ಗೀತೆ ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದಿತು. ದೇಶದ ಬಾವುಟದೊಳಗಿನ ಅಶೋಕ ಚಕ್ರ ಲಾಂಛನದ ಮಹತ್ವ ಸಾರಿದರು.
ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕ ಚಕ್ರವರ್ತಿ ಭಾರತದಲ್ಲೇ ಅತ್ಯಂತ ಶ್ರೇಷ್ಠ ದೊರೆ ಎಂಬುದನ್ನು, ಕಳಿಂಗ ಯುದ್ಧದ ತರುವಾಯ ಬೌದ್ಧ ಧರ್ಮ ಸ್ವೀಕರಿಸಿದ್ದನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಿ, ಮನಸೂರೆಗೊಳಿಸಿದರು.