

ಬೀದರ್: ಭಾರತವನ್ನು ೨೦೪೭ರ ವೇಳೆಗೆ ವಿಕಸಿತ ಮತ್ತು ವಿಶ್ವಗುರು ಆಗಿಸಲು ಯುವಕರು ಕೊಡುಗೆ ನೀಡಬೇಕು ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಫ್ಲ್ಯಾಗ್‌ಶಿಪ್ ಯೋಜನೆ ಹಾಗೂ ಕುಶಲ್ ಸೇ ಸಮೃದ್ಧಿ ಔರ್ ರೋಜಗಾರ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಉದ್ಯೋಗಕ್ಕಾಗಿ ಅಲೆದಾಡದೆ ಸ್ವಯಂ ಉದ್ಯೋಗದಾತರಾಗಬೇಕು. ನವ ಕೈಗಾರಿಕೆಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕು ಎಂದರು.
ಈಗಿನ ಡಿಜಿಟಲ್ ಯುಗದಲ್ಲಿ ಕೌಶಲಕ್ಕೆ ಬಹಳ ಪ್ರಾಮುಖ್ಯವಿದೆ. ಹೀಗಾಗಿ ಯುವಕರು ಏನಾದರೊಂದು ಕೌಶಲ ಬೆಳೆಸಿಕೊಳ್ಳಬೇಕು. ಕೌಶಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪಿಎಂಕೆವಿವೈ, ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಮುದ್ರಾ ಯೋಜನೆಗಳು ಕೈಗಾರಿಕೆ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಆರ್‌ಇ ಸಂಸ್ಥೆ ಕಾರ್ಯದರ್ಶಿ ಸತೀಶ್ ಪಾಟೀಲ್ ಮಾತನಾಡಿ, ಎನ್‌ಸಿಸಿ ಕೆಡೆಟ್‌ಗಳು ಕೌಶಲದ ಮಹತ್ವ ಅರಿತು ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಲೋಕೇಶ ಮಾನಸಿಂಗ್ ಮಾತನಾಡಿ, ಕೌಶಲ ಇದ್ದವರಿಗೆ ಎಲ್ಲೆಡೆ ಬೇಡಿಕೆ ಇದೆ. ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಜಿಲ್ಲೆಯಲ್ಲಿ ವೃತ್ತಿ ಕೌಶಲ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಅಂಚೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಮಾತನಾಡಿ, ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಸೇರಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಕರು ಇವುಗಳ ಲಾಭ ಪಡೆದು ಸಬಲರಾಗಬೇಕು ಎಂದರು.
ವಕೀಲ ಗುರುನಾಥ ರಾಜಗೀರಾ ಮಾತನಾಡಿ, ಯುವಕರು ಉನ್ನತ ಗುರಿ ಇಟ್ಟುಕೊಂಡು ಛಲದೊಂದಿಗೆ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಪ್ರಾಸ್ತಾವಿಕ ಮಾತನಾಡಿದರು. ಉದ್ಯೋಗ ಅಭಿವೃದ್ಧಿ ಪ್ರತಿನಿಧಿ ವೀರಶೆಟ್ಟಿ, ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಇತರರಿದ್ದರು. ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಶ್ವಿನ್ ಚವ್ಹಾಣ್ ಸ್ವಾಗತಿಸಿದರು. ಪ್ರವೀಣ್ ಜೀರ್ಗೆ ನಿರೂಪಣೆ ಮಾಡಿದರು. ಸೋಮನಾಥ ವಂದಿಸಿದರು.
೩೨ ಕರ್ನಾಟಕ ಬಟಾಲಿಯನ್ ಕಲಬುರಗಿ, ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಹಾಗೂ ಮೇರಾ ಯುವ ಭಾರತ ಸಹಯೋಗದಡಿ ಸಂಘಟಿಸಿದ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪುಸ್ತಕ ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕೌಶಲ ಇದ್ದವರಿಗೆ ಬೇಡಿಕೆ ಇದ್ದೇ ಇರುತ್ತದೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಲಭಿಸುವುದಿಲ್ಲ. ಸ್ವಯಂ ಉದ್ಯೋಗದ ಮೂಲಕ ಭವಿಷ್ಯ, ಬದುಕು ರೂಪಿಸಿಕೊಳ್ಳಬೇಕು. ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ಸಿಗುತ್ತದೆ.
| ಸತೀಶ್ ಪಾಟೀಲ್ ಕೆಆರ್‌ಇ ಸಂಸ್ಥೆ ಕಾರ್ಯದರ್ಶಿ