ಭಾರತ ತತ್ವಜ್ಞಾನಿಗಳ ತವರೂರು

24 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರ್ಮಿಕವಾಗಿ ಪ್ರಪಂಚದಲ್ಲೇ ಭಾರತ ತನ್ನದೇ ಆದ ವೈಶಿಷ್ಟೃ ಹೊಂದಿದೆ. ಧರ್ಮ ಪ್ರಧಾನವಾದ ಈ ಪುಣ್ಯಭೂಮಿ ಆಧ್ಯಾತ್ಮಿಕ ಸಾಧನೆಯ ಅಡಿಗಲ್ಲಾದ ತತ್ವಜ್ಞಾನಿಗಳ ತವರೂರೆನಿಸಿದೆ. ವಚನ, ದಾಸ ಸಾಹಿತ್ಯಗಳಂತೆ ತತ್ವಪದಗಳೂ ಧರ್ಮ-ಭಕ್ತಿಯ ತಳಹದಿಯಿಂದಲೇ ಹುಟ್ಟಿದೆ. ಇವುಗಳನ್ನು ಕೈವಲ್ಯ ಪದ, ಭಜನಾಪದ, ಸ್ವರ ವಚನಗಳೆಂದೂ ಕರೆಯುತ್ತಾರೆ ಎಂದು ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಶಂಕರ ಜೋಶಿ ಅಭಿಪ್ರಾಯಪಟ್ಟರು.
ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘‘ಕಲ್ಯಾಣ ಕರ್ನಾಟಕದ ತತ್ವಪದಕಾರರು’ ಕುರಿತು ಅವರು ಮಾತನಾಡಿದರು.
ಕಡಕೋಳ ಮಡಿವಾಳಪ್ಪ, ಖೈನೂರು ಕೃಷ್ಣಪ್ಪಯ್ಯ, ಚೆನ್ನೂರು ಜಲಾಲ ಸಾಹೇಬ ಕೂಡಲೂರು ಬಸವಶರಣರು, ಬಿದನೂರಿನ ಗಂಗಮ್ಮ, ಖೈನೂರಿನ ರಾಚವ್ವ, ಬಸವಕಲ್ಯಾಣದ ಫೈಮುದಾ ಫಾತಿಮಾ, ಪಿನೂಲಿ ಕರಿಬಸವಾರ್ಯ, ರಸ್ತಾಪುರ ಭೀಮಕವಿ, ನಾಗಠಾಣದ ಗಂಗಮ್ಮ, ಬಿದನೂರು ವಿರುಪಾಕ್ಷ, ಇತರ ತತ್ವಪದಕಾರರು ಮತ್ತು ಅವರ ತತ್ವ ಪದಗಳನ್ನು, ಅವುಗಳ ಒಳಾರ್ಥ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ ಮಾತನಾಡಿ, ತತ್ವಪದಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಮನ್ನಣೆ ಪಡೆದಿದ್ದು ಸೂಫಿ ಪರಂಪರೆ ಮತ್ತು ತತ್ವ ಪದಗಳು ಹೆಚ್ಚು ಸಾಮ್ಯತೆ ಪಡೆದಿವೆ. ತತ್ವ ಪದಕಾರರೆಲ್ಲ ಹಾಡುಗಾರ ಕವಿಗಳಾಗಿದ್ದು, ಹೆಚ್ಚೆಚ್ಚು ಆಧ್ಯಾತ್ಮದ ಸಾಧಕರಾಗಿದ್ದಾರೆ. ಅವರು ಸಾರ್ಥಕ ಬದುಕಿನ ರೀತಿ ಸಹ ಬಣ್ಣಿಸಿದ್ದಾರೆ ಎಂದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಪ್ರೊ. ದುಷ್ಯಂತ ನಾಡಗೌಡ, ಉಮೇಶ ನಾಯಿಕ, ಶ್ರೀಪಾದ ನಾಡಿಗೇರ, ಎಸ್.ಬಿ. ದ್ವಾರಪಾಲಕ, ಮಹಾಬಳೇಶ್ವರ ಸಿಂದಗಿ, ಆರ್.ಎಂ.ಹೊಸಮನಿ, ಜಿ.ಆರ್. ಭಟ್, ಅನಂತ ಸಿದ್ಧೇಶ್ವರ, ಡಾ. ಮಂದಾಕಿನಿ ಪುರೋಹಿತ, ಸರೋಜಾ ಕುಲಕರ್ಣಿ, ಸೀಮಾ ಪರಾಂಜಪೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net