ಭಾರತ ಚುನಾವಣಾ ಆಯೋಗದ ಪ್ರಶಸ್ತಿಗೆ ಡಿಸಿ ದಿವ್ಯಾಪ್ರಭು ಭಾಜನ

CTD 17 DC---006
Published on

ಚಿತ್ರದುರ್ಗ: ಮತದಾರರ ಪಟ್ಟಿ ಪರಿಷ್ಕರಣೆ,2023ನೇ ಸಾಲಿನಲ್ಲಿ ಯುವ ಮತದಾರರನ್ನು ಮತಪಟ್ಟಿಗೆ ಸೇರ್ಪಡೆಗೊಳಿಸುವುದರಲ್ಲಿ ಅತ್ಯುತ್ತಮವಾಗಿ ಕಾರ‌್ಯ ನಿರ್ವಹಿಸಿದ್ದಕ್ಕಾಗಿ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಭಾರತ ಚುನಾವಣಾ ಆಯೋಗದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯುತ್ತಮ ಚುನಾವಣಾ ಕಾರ‌್ಯಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರದಾನ ಮಾಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಅಧಿಕಾರಿಗಳನ್ನು ಆಯೋಗ ಆಯ್ಕೆ ಮಾಡಿದೆ.
ಸಾಮಾನ್ಯ ವರ್ಗದಡಿ ದಿವ್ಯಾಪ್ರಭು ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಅವರು ಭಾಜನರಾಗಿದ್ದಾರೆ.
ದಿವ್ಯಾಪ್ರಭು ಅವರು ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ,ಲೈಂಗಿಕ ಅಲ್ಪಸಂಖ್ಯಾತರು,ಅಂಗವಿಕಲ ಮತ ದಾರರ ನೋಂದಣಿ ಹೆಚ್ಚಳ ಸೇರಿದಂತೆ ಅವರು ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳನ್ನು ಆಯೋಗ ಪ್ರಶಸ್ತಿಗೆ ಪರಿಗಣಿಸಿದೆ. ಶಿಖಾ ಅವರು ಕಳೆದ ರಾಜ್ಯವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಉಚಿತ ಉಡುಗೊರೆಗಳ ಕುರಿತಂತೆ ಹಮ್ಮಿಕೊಂಡಿದ್ದ ಜನಜಾಗೃತಿ,ವಾಣಿಜ್ಯ ಕ್ಷೇತ್ರದಲ್ಲಿ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾಗಿ ಆಯೋಗ ಅವ ರನ್ನು ಹಾಗೂ ಇಲಾಖೆಯನ್ನು ಪ್ರಶಸ್ತಿಗೆ ಪರಿಗಣಿಸಿದೆ.
ಆಯೋಗ ಪ್ರತಿ ವರ್ಷ ಸಾಮಾನ್ಯ, ವಿಶೇಷ ವರ್ಗ,ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅ ತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯವೆಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಹೊಸದಿಲ್ಲಿ ಜ.25ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ.
ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ದಕ್ಷತೆಯಿಂದ ಉ ತ್ತಮವಾಗಿ ಕಾರ್ಯ ನಿರ್ವಹಿಸಲು ಉತ್ತೇಜನ ನೀಡುತ್ತದೆ. ಆಯೋಗದ ಪ್ರಶಸ್ತಿ ಜಿಲ್ಲೆಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಸಂದ ಗೌರವವಾಗಿದೆ ಎಂದು ದಿವ್ಯಾಪ್ರಭು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net