

ಮೈಸೂರು: ಎಲ್ಲ ಧರ್ಮಗಳ ಮೂಲ ಬೇರು ಭಾರತವಾಗಿದ್ದು, ಅನೇಕ ಜ್ಞಾನ, ತಂತ್ರಜ್ಞಾನ ಸಂಪತ್ತನ್ನು ಪ್ರಾಚೀನ ಕಾಲದಿಂದಲೂ ಹೊಂದಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬೌದ್ಧ, ಕ್ರಿಶ್ಚಿಯಾನಿಟಿ ಮೂಲ ಕೂಡ ಭಾರತವೇ ಆಗಿದೆ. ಅಲ್ಲದೆ ವಿಶ್ವ ವಿದ್ಯಾಲಯಗಳ ಪರಿಕಲ್ಪನೆ ಪ್ರಾರಂಭವಾಗಿರುವುದೂ ಭಾರತದಿಂದ ಎನ್ನುವುದು ವಿಶೇಷ. ನಳಂದ ವಿಶ್ವವಿದ್ಯಾಲಯದಲ್ಲಿ ಊಹೆಗೂ ನಿಲುಕದ ವಿಜ್ಞಾನ, ತಂತ್ರಜ್ಞಾನ, ಧಾರ್ಮಿಕ, ಅಧ್ಯಯನ, ಗ್ರಂಥಗಳ ಸಂಗ್ರಹ, ಸಾವಿರಾರು ವಿದ್ಯಾರ್ಥಿಗಳು ಒಮ್ಮೆಗೆ ಅಧ್ಯಯನ ಮಾಡಲು ವ್ಯವಸ್ಥೆ ಒಳಗೊಂಡಿದ್ದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅದಕ್ಕಾಗಿಯೇ ಅಮೆರಿಕದ ಹೆಸರಾಂತ ಇತಿಹಾಸ ತಜ್ಞ ವಿಲ್ ಡ್ಯುರಾಂಟ್ ಅವರು ಭಾರತ ಪ್ರಪಂಚದ ವಿಶ್ವ ಗುರು ಎಂದು ವಿಶ್ಲೇಷಿಸಿದ್ದಾರೆ ಎಂದು ಹೇಳಿದರು
ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ. ಕೆ.ಎಲ್.ಎನ್ ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ಪ್ರವೀಣ, ಹಣಕಾಸು ಅಧಿಕಾರಿ ಡಾ. ಎ. ಖಾದರ್ ಪಾಷ, ಡೀನ್‌ಗಳಾದ ಪ್ರೊ. ಲಕ್ಷ್ಮೀ, ಪ್ರೊ.ರಮನಾಥಂನಾಯ್ಡು, ಆಜಾದಿ ಕಾ ಅಮೃತ್ ಮಹೋತ್ಸವ ನೋಡಲ್ ಅಧಿಕಾರಿ ಡಾ. ಎನ್. ಆರ್. ಚಂದ್ರೇಗೌಡ, ಉಪಕುಲಸಚಿವ ಸಿ.ಪಿ. ಶಿವಕುಮಾರ್, ಸ್ಪರ್ಧಾತ್ಮಕ ಕೇಂದ್ರದ ಜೈನಹಳ್ಳಿ ಸತ್ಯನಾರಾಯಣಗೌಡ, ಡಾ. ವಿಜಯಕುಮಾರ್ ಅವರೆಕಾಡು ಇತರರು ಇದ್ದರು.