

ಬೆಳಗಾವಿ: ದೇಶ ಕಟ್ಟುವ ಭವಿಷ್ಯದ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಕಾರ್ಯ ಶ್ಲಾಘನೀಯ. ದೇಶದ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅತ್ಯಮೂಲ್ಯವಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನದ ಮೂಲಕ ದೇಶವನ್ನು ಎಲ್ಲ ಆಯಾಮಗಳಿಂದ ಬಲಿಷ್ಠಗೊಳಿಸಿ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಕಾರ್ಯಾಲಯ, ಬೆಳಗಾವಿ ದಕ್ಷಿಣ ಹಾಗೂ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಸೆ.05) ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -2023 ಹಾಗೂ ಬೆಳಗಾವಿ (ದ) ಜಿಲ್ಲಾ ಮಟ್ಟದ ಮತ್ತು ನಗರ ವಲಯ ಮಟ್ಟದ ಪ್ರತಿಭಾಕಾರಂಜಿ ಕಲೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಕೇವಲ ಅಂಕಿ ಆಧಾರದ ಮೇಲೆ ಶಾಲೆಗಳು ನಡೆಯುತ್ತಿವೆ, ವಿದ್ಯಾರ್ಥಿಗಳ ಅಂಕಿ ಸಂಖ್ಯೆಗಿಂತ ಪ್ರತಿ ಗ್ರಾಮದಲ್ಲಿ ಶಾಲೆಗಳು ಇರಲೇಬೇಕು. ಶಾಲೆಗಳ ಹೊಸ ಕಟ್ಟಡ, ಶಿಕ್ಷಣದ ಗುಣಮಟ್ಟ, ಉತ್ತಮ ಶಾಲಾ ಕೊಠಡಿ, ಶಿಕ್ಷಕರ ನೇಮಕ ಸೇರಿದಂತೆ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಅಭವೃದ್ಧಿಗೆ ಚಿಂತನೆ:
ಈಗಾಗಲೇ ಖಾಸಗಿ ಶಾಲೆಗಳಿಗೆ ಬಹಳ ಮಕ್ಕಳು ವಲಸೆ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳ ಮಾದರಿಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು. ಮಲೆನಾಡು ಪ್ರದೇಶದಲ್ಲಿನ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಲು ಬಹಳ ಕಷ್ಟಕರ ಸಂಗತಿಯಿದೆ. ಅಂತಹ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಶಿಕ್ಷಕರಲ್ಲಿ ಹೊಸ ಚಿಂತನೆಗಳು ಬೆಳೆಯಬೇಕು ಇದರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ಮೊದಲ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದಿರುವ ಸಾವಿತ್ರಿ ಬಾಯಿ ಫುಲೆ ಅವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಶಿಕ್ಷಕರು ಬುದ್ಧ, ಬಸವ ಅಂಬೇಡ್ಕರ್ ಅವರು ವಿಚಾರ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸಬೇಕು ಸಚಿವ ಜಾರಕಿಹೊಳಿ ಹೇಳಿದರು.
ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ:
ಮುಂದಿನ ಶಿಕ್ಷಕರ ದಿನಾಚರಣೆಯಲ್ಲಿ ಹೊಸ ಹೊಸ ಆಲೋಚನೆಗಳು ಚಿಂತನೆಗಳು ಶಿಕ್ಷಕರಲ್ಲಿ ಬರಬೇಕು. ಭವಿಷ್ಯದ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಉತ್ತಮ ಪ್ರಜೆಗಳ ತಯಾರಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಲೋಕೋಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.