ಭಾನುವಾರದ ಲಾಕ್​ಡೌನ್​ಗೆ ಜೈ

h26-Rayanna Circle
Published on

ಹುಬ್ಬಳ್ಳಿ: ಕರೊನಾ ಸೋಂಕು ಹರಡುವಿಕೆ ತಡೆಗೆ ಜಾರಿ ಮಾಡಲಾಗಿದ್ದ ಭಾನುವಾರದ ಲಾಕ್​ಡೌನ್ ಆದೇಶಕ್ಕೆ ವಾಣಿಜ್ಯ ನಗರಿಯಲ್ಲಿ ಬಹುತೇಕ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೋರ್ಟ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬೆಳಗ್ಗೆಯಿಂದ ವಾಹನಗಳು ಹಾಗೂ ಜನ ಸಂಚಾರ ಕಾಣಿಸಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಅಗತ್ಯ ವಸ್ತು ಸಾಗಣೆಗೆ ವಾಹನಗಳು ಓಡಾಡಿದವು. ಜನರ ಸಂಚಾರವೂ ವಿರಳವಾಗಿತ್ತು. ಜನತಾ

ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿಯ ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಔಷಧ ಅಂಗಡಿ, ಹಾಲು ಸೇರಿ ಅಗತ್ಯ ವಸ್ತುಗಳ ಅಂಗಡಿಗಳ ಬಾಗಿಲು ತೆರೆದಿದ್ದವು. ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದ ಪೊಲೀಸರು, ದಾಖಲಾತಿಗಳನ್ನು ಪರಿಶೀಲಿಸಿದರು. ದಾಖಲಾತಿ ಇಲ್ಲದವರಿಂದ ದಂಡವನ್ನೂ ಕಟ್ಟಿಸಿಕೊಂಡರು. ಹಳೆಯ ಹಾಗೂ ಹೊಸ ಬಸ್ ನಿಲ್ದಾಣದಿಂದ ಇತರೆಡೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪ್ರಯಾಣಿಕರಿಗೆ ಮೊದಲೇ ಇದರ ಮಾಹಿತಿ ಇದ್ದುದರಿಂದ ಬಸ್ ನಿಲ್ದಾಣಗಳತ್ತ ಹೋಗಿರಲಿಲ್ಲ. ಆಟೋಗಳ ಸಂಚಾರ ಸಾಮಾನ್ಯವಾಗಿತ್ತು. ಆಸ್ಪತ್ರೆಗಳಲ್ಲಿ ತುರ್ತು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು. ನಗರದ ಕೆಲವೆಡೆ ಮಾಂಸ ಮಾರಾಟ ಸಾಮಾನ್ಯವಾಗಿತ್ತು. ಆದರೆ ಅಷ್ಟೊಂದು ಮಾಂಸ ಪ್ರಿಯರು ಆಗಮಿಸಲಿಲ್ಲ. ಇದರಿಂದ ವ್ಯಾಪಾರಿಗಳು ಜನರ ದಾರಿಯನ್ನು ಕಾಯುವಂತಾಗಿತ್ತು.

ನೀಲಿಜಿನ್ ರಸ್ತೆಯಲ್ಲಿ ಕಾಮಗಾರಿ: ನೀಲಿಜಿನ್ ರಸ್ತೆ ತೀವ್ರ ಹಾಳಾಗಿದ್ದರಿಂದ ಲಾಕ್​ಡೌನ್ ಸಂದರ್ಭದಲ್ಲಿ ಕಾಮಗಾರಿ ಚುರುಕುಗೊಳಿಸಲಾಗಿತ್ತು. ಕಾರ್ವಿುಕರು ಅಲ್ಲಲ್ಲಿ ಸಿಮೆಂಟ್ ಸುರಿದು ರಸ್ತೆ ಸಮತಟ್ಟುಗೊಳಿಸುವ ಕೆಲಸ ಮಾಡುತ್ತಿದ್ದರು.

ಮೊಬೈಲ್ ಕಳ್ಳನಿಗೆ ಗೂಸಾ: ರಸ್ತೆಯಲ್ಲಿ ಹೆಚ್ಚು ಜನ ಇಲ್ಲದ್ದನ್ನು ಕಂಡ ಕಳ್ಳನೊಬ್ಬ ದಾರಿಹೋಕನ ಮೊಬೈಲ್ ಕಸಿಯಲು ಯತ್ನಿಸಿದ. ಆಗ ಓಡಿಹೋಗುತ್ತಿದ್ದವರನ್ನು ಕಂಡು ಪೊಲೀಸರು ಬೆನ್ನು ಹತ್ತಿದಾಗ ಈ ಅಂಶ ಬಯಲಿಗೆ ಬಂದಿದೆ. ಮೊಬೈಲ್ ಕಳ್ಳನಿಗೆ ಗೂಸಾಕೊಟ್ಟ ಪೊಲೀಸರು, ನಿಜವಾದ ಮಾಲೀಕನಿಗೆ ಮೊಬೈಲ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net