

ಹಾಸನ: ಭ್ರಷ್ಟರನ್ನು, ಅಪ್ರಾಮಾಣಿಕರನ್ನು, ಸ್ವಜನ ಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜ ಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣು ಪಾಲು ಮಾಡುತ್ತಿರುವ ರಾಜಕಾರಣಿಗಳನ್ನು ಕಿತ್ತೆಸೆದು ಪ್ರಾಮಾಣಿಕರನ್ನು ಆಯ್ಕೆ ಮಾಡಿ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಜನರಲ್ಲಿ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಪ್ರಾರಂಭವಾದ ‘ಕರ್ನಾಟಕಕ್ಕಾಗಿ ನಾವು’ ಎಂಬ ಬೈಕ್ ಜಾಥಾ ರಾಜ್ಯದ 28 ಜಿಲ್ಲೆಗಳಲ್ಲೂ ಸಾಗಿ ಶುಕ್ರವಾರ ಮಧ್ಯಾಹ್ನ ಹಾಸನ ತಲುಪಿತ್ತು. ಈ ವೇಳೆ ಮಾತನಾಡಿದ ಅವರು, ಜೆಸಿಬಿ ಪಕ್ಷಗಳ ರಾಜಕಾರಣಿಗಳನ್ನು ಮತ್ತು ಅವರ ಮಕ್ಕಳನ್ನು ರಾಜಕೀಯ ನಾಯಕರೆಂದು ಒಪ್ಪಿಕೊಳ್ಳಬೇಡಿ. ಜನಪರ ಕಾಳಜಿಯುಳ್ಳ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರುತ್ತೇನೆ. ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕೆಆರ್‌ಎಸ್ ಪಕ್ಷವು ‘ಕರ್ನಾಟಕಕ್ಕಾಗಿ ನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಎನ್. ದೀಪಕ್, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ವಿ.ಬಿ.ಕೃಷ್ಣ , ಬಿ.ಜಿ ಕುಂಬಾರ್, ನಂದ ರೆಡ್ಡಿ, ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.