

ಅರಸೀಕೆರೆ: ಬಲಿಷ್ಠ ಭಾರತದ ನಿರ್ಮಾಣ ಯುವ ಸಮುದಾಯದ ಮೇಲಿದೆ ಎಂದು ತಿಪಟೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ರೇಣುಕಾ ಪ್ರಸಾದ್ ಹೇಳಿದರು.
ತಾಲೂಕಿನ ಜಾವಗಲ್ ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷಗಳು ಪೂರೈಸುವ ಹೊಸ್ತಿಲಿನಲ್ಲಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಇನ್ನಷ್ಟು ದಿಟ್ಟ ಹೆಜ್ಜೆ ಇಡಬೇಕಿದೆ. ಆರೋಗ್ಯ, ಸಾರ್ವಜನಿಕ ಸೇವೆಯಲ್ಲಿಯೂ ನಾವು ಮೂಂಚೂಣಿಯಲ್ಲಿದ್ದೇವೆ ಎಂಬುದು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಮನವರಿಕೆಯಾಗಿದೆ. ಭವ್ಯ ಭಾರತದ ನಿರ್ಮಾಣ ನಮ್ಮ, ನಿಮ್ಮೆಲ್ಲರ ಮೇಲಿದ್ದು, ಒಗ್ಗೂಡಿ ನಡೆಯೋಣ ಎಂದು ಕರೆ ನೀಡಿದರು.
ಕಾಲೇಜು ಆವರಣದಲ್ಲಿ ಸರಸ್ವತಿ ವಿಗ್ರಹ ಅನಾವರಣ ಮಾಡಿದ ದಾನಿ ಸಣ್ಣೇಗೌಡ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಉಚಿತವಾಗಿ ವಿದ್ಯಾಧಿ ದೇವತೆಯ ವಿಗ್ರಹವನ್ನು ಕೊಡುಗೆಯ ರೂಪದಲ್ಲಿ ನೀಡುತ್ತಿದ್ದೇನೆ. ಆಧುನಿಕ ಜಗತ್ತಿನ ಸ್ಪರ್ಧೆಗೆ ನೀವೆಲ್ಲರೂ ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಪ್ರೊ.ಮಂಜುನಾಥ್ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಮಾಜಿ ಸೈನಿಕ ಚಂದ್ರಪ್ಪ, ಗ್ರಾಪಂ ಅಧ್ಯಕ್ಷೆ ಮಮತಾ ಮಾತನಾಡಿದರು. ಮುಖಂಡರಾದ ಮಸಾಲೆ ರಮೇಶ್, ಸೋಮಶೇಖರ್, ಪ್ರಾಧ್ಯಾಪಕರಾದ ವಿರೂಪಾಕ್ಷ, ವೆಂಕಟೇಶ್, ಪುಟ್ಟಸ್ವಾಮಿ, ಲತಾ, ರವೀಶ್ ಸೇರಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.