ಭವ್ಯ ಅನುಭವ ಮಂಟಪಕ್ಕೆ ಬದ್ಧ

24Bk2
Published on

ಬಸವಕಲ್ಯಾಣ: ಇಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಅಗತ್ಯವಿದ್ದಷ್ಟು ಅನುದಾನ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ನಗರದಲ್ಲಿ ಸೋಮವಾರ ತಾಪಂ ಕಟ್ಟಡದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿ, ಸಿಎಂ ಯಡಿಯೂರಪ್ಪ ಅವರು ಅನುಭವ ಮಂಟಪಕ್ಕೆ ಈಗಾಗಲೇ 50 ಕೋಟಿ ರೂ. ನೀಡಿದ್ದಾರೆ. ಬರುವ ಬಜೆಟ್ನಲ್ಲಿ 100 ಕೋಟಿ ರೂ. ಒದಗಿಸುವ ಭರವಸೆ ಕೊಟ್ಟಿದ್ದಾರೆ. ಭವ್ಯವಾದ ಅನುಭವ ಮಂಟಪ ನಿಮರ್ಾಣ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದರು.
ಶಾಸಕ ಬಿ.ನಾರಾಯಣರಾವ ಮಾತನಾಡಿ, ಜಿಲ್ಲೆಯಲ್ಲಿ ಹುಮನಾಬಾದ್, ಭಾಲ್ಕಿ ಕ್ಷೇತ್ರಗಳು ಅಭಿವೃದ್ಧಿಯಾಗಿವೆ. ಇದೇ ರೀತಿಯಲ್ಲಿ ಐತಿಹಾಸಿಕ ಸ್ಥಳವಾದ ಬಸವಕಲ್ಯಾಣ ಸಮಗ್ರ ವಿಕಾಸಕ್ಕೆ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರು ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಮಾತನಾಡಿದರು. ತಾಪಂ ಅಧ್ಯಕ್ಷೆ ಯಶೋಧಾ ರಾಠೋಡ್, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ತಾಪಂ ಉಪಾಧ್ಯಕ್ಷ ಸಂಗಮೇಶಪ್ಪ ಬಿರಾದಾರ, ಜಿಪಂ ಸದಸ್ಯರಾದ ರಾಜಶೇಖರ ಮೇತ್ರೆ, ಗುಂಡುರೆಡ್ಡಿ, ಸುಧೀರ ಕಾಡಾದಿ, ಆನಂದ ಪಾಟೀಲ್, ನಿರ್ಮಲಾ ಮಾನೆಗೋಪಾಲೆ, ತಹಸೀಲ್ದಾರ್ ಸಾವಿತ್ರಿ ಸಲಗರ ಇದ್ದರು. ತಾಪಂ ಇಒ ಮಡೋಳಪ್ಪ ಪಿ.ಎಸ್. ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net