ಭವಿಷ್ಯದಲ್ಲಿ ಹಿಂದುಗಳಿಗೆ ಅಪಾಯ ಸಾಧ್ಯತೆ

16-GPT-2
Published on


ಗುಂಡ್ಲುಪೇಟೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ಹಿಂದುಗಳಿಗೆ ಅಪಾಯ ಎದುರುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೈಸೂರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುಂಡ್ಲುಪೇಟೆ ತಾಲೂಕು ಬ್ರಾಹ್ಮಣ ಸಭಾ, ಕೌಂಡಿನ್ಯ ವಿಪ್ರ ಬಳಗ ಹಾಗೂ ಶಾರದಾ ಸತ್ಸಂಗ ಸಮಾಜದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದು ದೇವಾಲಯಗಳ ಹುಂಡಿದ ಹಣದ ಮೇಲೆ ಕಣ್ಣು ಹಾಕಿರುವ ಸರ್ಕಾರ ಅದನ್ನು ಅನ್ಯಧರ್ಮಿಯರ ಅಭಿವೃದ್ಧಿಗೆ ಬಳಸಲು ಮುಂದಾಗಿದೆ. ಸರ್ಕಾರದ ತೀರ್ಮಾನಗಳಿಂದ ಮುಂದಿನ ದಿನಗಳಲ್ಲಿ ಹಿಂದುಗಳಿಗೆ ಅದರಲ್ಲೂ ಬ್ರಾಹ್ಮಣ ಸಮುದಾಯಕ್ಕೆ ತೊಂದರೆ ಎದುರಾಗುವ ಸಂಭವವಿದೆ. ಮುಂಬರುವ ಲೋಕಸಭಾ ಚುನಾವಣೆ ನಂತರ ಹೊಸ ತೀರ್ಮಾನಗಳು ಹೊರ ಬಿದ್ದರೂ ಆಶ್ಚರ್ಯವಿಲ್ಲ. ಆದ್ದರಿಂದ ಬ್ರಾಹ್ಮಣ ಸಮಾಜದವರು ಸಂಘಟಿತರಾದಾಗ ಮಾತ್ರ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾದ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜನಾಂಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬ್ರಾಹ್ಮಣ ಸಂಘದ ವತಿಯಿಂದ ಪುಸ್ತಕ ವಿತರಿಸಲಾಯಿತು. ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್ಟ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಂ.ಶ್ರೀಕಂಠಕುಮಾರ್, ಸತ್ಯನಾರಾಯಣ, ವಿಶ್ವನಾಥ್, ಶ್ರೀನಿವಾಸ ಪ್ರಸಾದ್, ಮುಖಂಡರು ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net