ಭವಿಷ್ಯದಲ್ಲಿ ವಿಜ್ಞಾನಿಗಳಾಗಲು ಸಲಹೆ

h3-Agastya 3
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಿದ್ಯಾರ್ಥಿಗಳು ಆವಿಷ್ಕಾರ ಸ್ಪರ್ಧೆಯಲ್ಲಿ ಅನೇಕ ಮಾದರಿಗಳನ್ನು ತಯಾರಿಸಿದ್ದಾರೆ. ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನಿಗಳಾಗಬೇಕು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಸಲಹೆ ನೀಡಿದರು.

ಏಕಸ್ ಪ್ರತಿಷ್ಠಾನ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ನಗರದ ಹೊಸೂರು ಬಳಿಯ ಅನಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ‘ಆವಿಷ್ಕಾರ-2023: ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ’ಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರು ವಿಜ್ಞಾನ ವಿಷಯವನ್ನು ಕೇವಲ ಬೋಧಿಸುವುದು ಮಾತ್ರವಲ್ಲದೆ, ಅದರಲ್ಲಿ ಬರುವ ಪ್ರಯೋಗಗಳನ್ನು ಮಾಡಿಸಿ ತೋರಿಸಬೇಕು. ಇತರರಿಗೆ ಮಾದರಿ ಆಗಬೇಕು ಎಂದು ಸಲಹೆ ನೀಡಿದರು.

ಏಕಸ್ ಪ್ರತಿಷ್ಠಾನದ ಸಹಾಯಕ ಉಪಾಧ್ಯಕ್ಷ ಡಾ. ಪ್ರವೀಣಕುಮಾರ ನಾಯಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ ಮೂಡಿಸಲು ಏಕಸ್ ಪ್ರತಿಷ್ಠಾನವು ಅಗಸ್ತ್ಯ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಅನಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ, ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮೂಲಕ ಗ್ರಾಮೀಣ ಭಾಗದ ಶಾಲೆಗಳಿಗೆ ತೆರಳುತ್ತಿದ್ದೇವೆ. ಸತತ ಮೂರು ವರ್ಷಗಳಿಂದ ಆವಿಷ್ಕಾರ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುತ್ತ ಬಂದಿದೇವೆ ಎಂದರು.

ಅಗಸ್ತ್ಯ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ. ಬಬಿತಾ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯ 62 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳ ವಿಭಾಗದಿಂದ 37 ಮಾದರಿಗಳು ಆಯ್ಕೆಯಾಗಿದ್ದು, ವಿಜ್ಞಾನ ಶಿಕ್ಷಕರ ವಿಭಾಗದಿಂದ 25 (ಟಿಎಲ್​ಎಂ) ಮಾದರಿಗಳು ಸ್ಪರ್ಧೆಗೆ ಆಯ್ಕೆಯಾಗಿವೆ. 45 ಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸರ್ಧೆ ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲಿ ಅತ್ಯಾಕರ್ಷಕ ನಗದು ಮತ್ತು ಪಾರಿತೋಷಕ ನೀಡಲಾಗುವುದು ಎಂದು ತಿಳಿಸಿದರು.

ಇಸ್ಕಾನ್ ಮತ್ತು ಅಕ್ಷಯ ಪಾತ್ರೆ ಫೌಂಡೇಷನ್ ಧಾರವಾಡ ಅಧ್ಯಕ್ಷ ರಾಜೀವ ಲೋಚನದಾಸ, ಏಕಸ್​ನ ಹಿರಿಯ ವ್ಯವಸ್ಥಾಪಕ ಉದಯ ಸಾನಿಕೊಪ್ಪ, ಡಾ. ಸತೀಶ ಇರಕಲ್, ಡಾ. ಸಂತೋಷ ಜೀವಣ್ಣವರ, ಇತರರು ಇದ್ದರು. ಅಗಸ್ಱ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net