ಭವಿಷ್ಯದ ಪೀಳಿಗೆಗಾಗಿ ಪರಿಸರ ಉಳಿಸಿ

2525
Published on

ನಾಗರಮುನ್ನೋಳಿ: ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ಲಭ್ಯವಾಗಬೇಕೆಂದರೆ ನಾವು ಗಿಡ-ಮರ ಬೆಳೆಸಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಸಮೀಪದ ಕೆ.ಕೆ. ಹಂಚನಾಳ ಗ್ರಾಮದ ಶ್ರೀ ಅಮೋಘ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಬಿಜೆಪಿ ಒಬಿಸಿ ಮೋರ್ಚಾ ರಾಯಬಾಗ ಘಟಕದ ವತಿಯಿಂದ ಏರ್ಪಡಿಸಿದ್ದ ಜನಸಂಘ ಸಂಸ್ಥಾಪಕ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವು ನೆಡುವ ಸಸಿ ಹೆಮ್ಮರವಾಗಿ ಬೆಳೆದು ನಮ್ಮ ಮಕ್ಕಳು-ಮೊಮ್ಮಕ್ಕಳಿಗೆ ನೆರಳಾಗುತ್ತವೆ. ಹಾಗಾಗಿ, ರೈತರು ಜಮೀನಿನ ಬದುವಿನಲ್ಲಿ ಸಸಿ ನೆಡಬೇಕು. ನೆಟ್ಟ ಸಸಿಗಳನ್ನು ಪಾಲನೆ, ಪೋಷಣೆ ಮಾಡಬೇಕು ಎಂದರು.

ಕರೊನಾ ಎರಡನೆಯ ಅಲೆ ಹಾವಳಿ ತಗ್ಗಿದ್ದರೂ ಜನರು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸುವಿಕೆ ಹಾಗೂ ದೈಹಿಕ ಅಂತರ ಪಾಲನೆ ನಿಯಮಗಳನ್ನು ಉಲ್ಲಂಘಿಸಬಾರದು. ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಲು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಭಾತೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿದರು. ಬಿಜೆಪಿ ಮುಖಂಡ ಸುರೇಶ ಬೆಲ್ಲದ, ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೋಣವಾಡೆ.

ಓಬಿಸಿ ಮೋರ್ಚಾ ಅಧ್ಯಕ್ಷ ಬಸು ಮಾಳಗೆ, ವಿಜಯ ಕೋಠಿವಾಲೆ, ನ್ಯಾಯವಾದಿ ರವಿ ಹಿರೇಕೊಡಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳಣ್ಣವರ, ಸದಾಶಿವ ಹುಂಜ್ಯಾಗೋಳ, ಸಂತೋಷ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net