

ಹಾಸನ: ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣಗಳನ್ನು ಮೈಗೂಡಿಕೊಳ್ಳುವುದರ ಮೂಲಕ ಭವಿಷ್ಯದ ನಾಯಕರುಗಳಾಗಿ ರೂಪಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಅಣುಕು ಸಂಸತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಷಯಧಾರಿತವಾಗಿ ಚರ್ಚೆಯಲ್ಲಿ ಪಾಲ್ಗೋಳ್ಳುವುದರಿಂದ ಹೆಚ್ಚಿನ ವಿಷಯ ಗ್ರಹಿಕೆಗೆ ಸಹಕಾರಿಯಾಗಲಿದೆ ಎಂದರು.
ಅಭಿವೃದ್ಧಿಗೆ ಪೂರಕವಾಗಿ ಚರ್ಚೆಗಳು ನಡೆಯಬೇಕು. ಪ್ರಶ್ನೆ ಮಾಡದೆ ಯಾವುದೇ ವಿಷಯಗಳನ್ನು ಒಪ್ಪಿಕೊಳ್ಳಬಾರದು ಇದರಿಂದ ಸಾಮಾಜಿಕ ಸಮಸ್ಯೆಗಳನ್ನು ನಿವಾರಣೆಗೆ ನೆರವಾಗಲಿದೆ ಎಂದರಲ್ಲದೆ, ಈ ಅಣುಕು ಸಂಸತ್ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಡಿಯಲ್ಲಿ ಜನರ ಹಿತರಕ್ಷಣೆಗೆ ಹಾಗೂ ಆಡಳಿತವನ್ನು ಸುಲಲಿತವಾಗಿ ನಡೆಸಲು ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅದರಂತೆ ಸಂವಿಧಾನ ಬದ್ದವಾಗಿ ಪ್ರಚಲಿತ ವಿದ್ಯಾಮಾನಗಳ ಕುರಿತು ಚರ್ಚೆಯಾಗಲಿ ಎಂದು ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಧೈರ್ಯವಾಗಿ ಮಾತನಾಡುವ ಕೌಶಲ್ಯ ಬೆಳಸಿಕೊಂಡು ರಾಷ್ಟ್ರ ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಅಧಿಕಾರಿಗಳು ಮಕ್ಕಳು ಇದ್ದರು
ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಕಲಾಪದ ರೀತಿಯಲ್ಲಿ ಸಭಾಪತಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಕೇಳುವುದರೊಂದಿಗೆ ಗಮನಸೆಲೆದರು