

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸ್ಮಾರ್ಟ್ಸಿಟಿ ಮಿಷನ್ ಸ್ಲಮ್ಳ ಅಭಿವೃದ್ಧಿಯತ್ತ ಕೊಡುಗೆ ನೀಡಲಿಲ್ಲ. ಉದ್ಯಾನ, ಗಟಾರ, ರಸ್ತೆ ನಿರ್ವಣವನ್ನು ಸ್ಮಾರ್ಟ್ ಎಂದು ಬಿಂಬಿಸಲಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಮುಂದಿನ 25 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಭವಿಷ್ಯದ ನಗರ ಯೋಜನೆ ಜಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿಯ ಹು-ಧಾ ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಇ-ಆಸ್ತಿ ಹಾಗೂ ಆಸ್ತಿ ತೆರಿಗೆ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಅಧಿಕಾರ ಶಾಶ್ವತವಾಗಿ ಇರುವುದಿಲ್ಲ. ನಗರ ಬೆಳವಣಿಗೆಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರ ಯೋಜನೆಗೆ ಸಂಬಂಧಿಸಿದಂತೆ ಪರಿಣಿತರು ಇರುವುದಿಲ್ಲ. ಆದರೆ, ಅಂತಾರಾಷ್ಟ್ರೀಯ ಸಂಸ್ಥೆಯ ನೆರವಿನೊಂದಿಗೆ ಭವಿಷ್ಯದ ನಗರ ಯೋಜನೆ ರೂಪಿಸಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಇ-ಸ್ವತ್ತು ಹಾಗೂ ಆಸ್ತಿ ತೆರಿಗೆ ಮೇಳ ಒಂದು ಉತ್ತಮ ಉಪಕ್ರಮವಾಗಿದೆ. ಇ-ಸ್ವತ್ತು ಸೃಜಿಸುವಲ್ಲಿ ಪಾಲಿಕೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿ ಬೇರೆಯದಕ್ಕೆ ದಾರಿ ಮಾಡಿಕೊಂಡಿದ್ದಾರೆ ಎಂದು ನನ್ನ ಬಳಿ ಸಾಕಷ್ಟು ದೂರುಗಳು ಬರುತ್ತಿದ್ದವು. ಇನ್ನು ಮುಂದಾದರೂ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿ. ಆಸ್ತಿ ಮಾಲೀಕರಿಗೆ ತ್ವರಿತವಾಗಿ ಇ-ಸ್ವತ್ತು ಸಿಗುವಂತಾಗಲಿ ಎಂದರು.
ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯ ಬಳಿ 100 ಎಕರೆ ಜಾಗವಿದ್ದು, ಅಲ್ಲಿ ಕೆಆರ್ಎಸ್ ಮಾದರಿಯಲ್ಲಿ ಸೌಂದಯೀಕರಣಕ್ಕೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ವಿಪಕ್ಷ ನಾಯಕ ರಾಜಶೇಖರ ಕಮತಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚಂದ್ರಶೇಖರ ಮನಗುಂಡಿ, ಶಿವು ಮೆಣಸಿನಕಾಯಿ, ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ, ಇತರರು ಇದ್ದರು. ಪಾಲಿಕೆ ಉಪ ಆಯುಕ್ತ ಪಿ.ಬಿ. ವಿಶ್ವನಾಥ ಸ್ವಾಗತಿಸಿದರು.