ಭವಿಷ್ಯದ ದೃಷ್ಟಿಯಿಂದ ನೀರಿನ ಮೂಲಗಳ ರಕ್ಷಣೆ ಅಗತ್ಯ

28M.D.R.2
Published on

ಮದ್ದೂರು: ನೀರಿನ ಮೂಲಗಳಾದ ನದಿ, ಕೆರೆ, ಕಟ್ಟೆ ಹಾಗೂ ಬಾವಿಗಳನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಅತ್ಯಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಹೇಳಿದರು.


ತಾಲೂಕಿನ ಶಂಕರಪುರ ವಲಯದ ಮುದಿಗೆರೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹೂಳೆತ್ತಿದ ಕೆರೆಗೆ ಬಾಗಿನ ಸಮರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಅಂಗಳದಲ್ಲಿ ಗಿಡ ನಾಟಿ, ಕೆರೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಜಲ ಮೂಲಗಳನ್ನು ನಾವು ಉಳಿಸಿದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.


ಮುಂದಿನ ದಿನಗಳಲ್ಲಿ ಕೆರೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು. ಕೆರೆ ಗ್ರಾಮದ ಸಂಪತ್ತು ಮತ್ತು ರೈತನ ಬೆನ್ನೆಲುಬು. ಆದ್ದರಿಂದ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದರು.


ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಜನಪರ ಮತ್ತು ಸಮುದಾಯ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದು ಪ್ರಸಂಶನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಶಿವರಾಮು, ಬೆಸಗರಹಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ದೊಡ್ಡಯ್ಯ, ಜಿಲ್ಲಾ ನಿರ್ದೇಶಕಿ ಚೇತನಾ, ಗ್ರಾಪಂ ಅಧ್ಯಕ್ಷ ಪ್ರದೀಪ್, ಸದಸ್ಯರಾದ ವಿಜಯಕುಮಾರ್, ಗೌರಮ್ಮ, ಇಂಜಿನಿಯರ್ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net