ಭವಿಷ್ಯದ ತಿರುವಿನ ಘಟ್ಟದಲ್ಲಿ ಮೈಮರೆಯದಿರಿ

22kkr,,1
Published on

ಕಿಕ್ಕೇರಿ: ಭವಿಷ್ಯದ ತಿರುವಿನ ಘಟ್ಟದಲ್ಲಿ ಅನಗತ್ಯ ವಿಷಯಗಳಿಗೆ ಮನಸ್ಸು ವಾಲಿದರೆ, ಕಷ್ಟದ ದಿನಗಳು ಎದುರಾಗಲಿವೆ ಎಂದು ಪ್ರಾಂಶುಪಾಲ ಎಲ್. ವಿನೋದ್‌ಸಿಂಗ್ ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.


ಪಟ್ಟಣದ ಕೆಪಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಸತತ 2ವರ್ಷ ಕರೊನಾದಿಂದಾಗಿ ಭೌತಿಕ ತರಗತಿ ನಡೆಯದೆ ಮೊಬೈಲೇ ಕಾಲೇಜು ಆಗಿತ್ತು. ಭೌತಿಕ ತರಗತಿ ಆರಂಭವಾದ ಮೇಲೆ ಈಗ ಮೊಬೈಲ್ ಚಟವಾಗಿ, ಸನ್ನಿಯಾಗಿ ಮಾನಸಿಕ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಶಿಕ್ಷಣಕ್ಕೆ ಪೂರಕ ಶಕ್ತಿಯಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಅಗತ್ಯ. ಇಂತಹ ಚಟುವಟಿಕೆ ಇಲ್ಲವಾದಲ್ಲಿ ವಿದ್ಯಾರ್ಥಿ ಜೀವನ ಜಡ್ಡುಗಟ್ಟಲಿದೆ. ಸತತ ಓದು ಭವಿಷ್ಯದ ಮೆಟ್ಟಿಲು. ಓದುವ ವಯಸ್ಸಿನಲ್ಲಿ ಆಲಸ್ಯ, ಸೋಮಾರಿತನ ತೋರಿದರೆ ಜೀವನಪೂರ್ತಿ ಕಷ್ಟ ಎದುರಿಸಬೇಕಾದೀತು. ಪುಸ್ತಕ, ದಿನಪತ್ರಿಕೆಗಳಿಂದ ಎಲ್ಲ ವಿದ್ಯಮಾನಗಳನ್ನು ಅರಿಯುವ ಜತೆಗೆ ಜ್ಞಾಪಕ ಶಕ್ತಿ ವೃದ್ಧಿಸಲಿದೆ. ದಿನದ ಸ್ವಲ್ಪ ವೇಳೆ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.


ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪಪ್ರಾಂಶುಪಾಲ ಬಸವರಾಜಪ್ಪ, ಮುಖ್ಯಶಿಕ್ಷಕಿ ಪಾರ್ವತಿ, ಶಿಕ್ಷಕ ಎಸ್.ಎಂ.ಬಸವರಾಜು, ಉಪನ್ಯಾಸಕರಾದ ಕುಮಾರಸ್ವಾಮಿ, ದೊರೆಸ್ವಾಮಿ, ರಮೇಶ, ನಾಗೇಶ್, ರಾಜೇಶ್ವರಿ, ಚಂದ್ರಿಕಾ, ನಂದಿನಿ, ಚೈತ್ರಾ, ಫಾತಿಮಾ ಖಾನಂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net