ಭವಿಷ್ಯಕ್ಕಾಗಿ ಸಾವಯವಕ್ಕಿಳಿದ ರೈತ

07rajesh6
Published on

ಚಾಮರಾಜನಗರ: ವರ್ತಮಾನದ ತಲ್ಲಣಗಳಿಗೆ ಹೆದರಿ ಭವಿಷ್ಯವನ್ನು ಕಡೆಗಣಿಸಿರುವ ಕೃಷಿಯಿಂದ ವಿಷವನ್ನಲ್ಲದೆ ಬೇರೆನನ್ನೂ ಉತ್ಪಾದನೆ ಮಾಡಲಾರದು. ಅದೇ ಭವಿಷ್ಯಕ್ಕಾಗಿ ವರ್ತಮಾನದಲ್ಲೇ ಬದಲಾವಣೆ ತಂದುಕೊಂಡರೆ ಭೂಮಿಯ ಉಳಿವು, ವಿಷ ಮುಕ್ತ ಆಹಾರ ಉತ್ಪಾದನೆ ಮಾಡಬಹುದು ಎನ್ನುವುದು ರೈತ ಚೆಲುವರಾಯಸ್ವಾಮಿ ಕೃಷಿಯ ನೀತಿ.

ತಾಲೂಕಿನ ಕಿರಗೂಸೂರು ಗ್ರಾಮದ ನಿವಾಸಿ ಚೆಲುವರಾಯಸ್ವಾಮಿಗೆ ಕೃಷಿ ಖುಷಿಯ ವೃತ್ತಿ. ಪ್ರಯತ್ನ ಪ್ರಯೋಗವೇ ಪ್ರವೃತ್ತಿ. ಅರಣ್ಯ ಕೃಷಿ ವಿಧಾನದಲ್ಲಿ ಬೇಸಾಯ ಮಾಡುತ್ತಿದ್ದಾರೆ. ಬಿಎ ವ್ಯಾಸಂಗ ಮಾಡಿದ್ದರೂ ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಮಾದರಿಯಾಗುವ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿರುವ ಚೆಲುವರಾಯಸ್ವಾಮಿ ಸಾವಯವ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿರುವುದಾಗಿದೆ. ಇದಕ್ಕೂ ಮೊದಲು, ಅಂದರೆ 3 ವರ್ಷಗಳ ಹಿಂದೆ ರಾಸಾಯನಿಕ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾಗ ಭೂಮಿಯ ಲವತ್ತತೆ ಹಾಳಾಗುತ್ತಿತ್ತು. ಭವಿಷ್ಯ ಮಣ್ಣುಪಾಲಾಗುವ ಆತಂಕದ ಎದುರಾದಾಗ ಸಾವಯವ ಪದ್ಧತಿಯನ್ನು ಅನುಸರಿಸಲು ಮುಂದಾದರು. ಅದರಲ್ಲೂ ಅರಣ್ಯ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಅರಣ್ಯ ಕೃಷಿ ಪದ್ಧತಿ: ರೈತ ಚೆಲುವರಾಯಸ್ವಾಮಿ ಕೃಷಿ ಪ್ರಯತ್ನ ಸಣ್ಣದಾಗಿದ್ದರೂ ರಾಸಾಯನಿಕ ಮುಕ್ತವಾಗಿರುವುದರಿಂದ ಮೌಲ್ಯಯುತವಾಗಿದೆ. ಜತೆಗೆ ಅರಣ್ಯ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಪದ್ಧತಿಯಲ್ಲಿ ಕೃಷಿ ಭೂಮಿಯ ಅಂಚಿನಲ್ಲಿ ಉಪಯೋಗವಾಗುವ ಮರಗಳನ್ನು ಬೆಳೆಯಲಾಗುತ್ತಿದೆ. ಮೇವಿನ ಹುಲ್ಲು, ಮರಗಳು, ಕಿರು ಹಣ್ಣುಗಳನ್ನು ಹಾಕಲಾಗುತ್ತಿದೆ. ಈ ಗಿಡ-ಮರಗಳು ಪಕ್ಷಿಗಳನ್ನು ಆಕರ್ಷಣೆ ಮಾಡುತ್ತವೆ. ಪಕ್ಷಿಗಳು ಕೀಟಗಳನ್ನು ತಿಂದು ರೋಗಬಾಧೆ ತಪ್ಪಿಸುತ್ತವೆ. ರಾಸಾಯನಿಕ ಸಿಂಪಡನೆಯನ್ನು ತಪ್ಪಿಸುತ್ತದೆ.

ಈ ವಿಧಾನದನ್ವಯ ರೈತ ಚೆಲುವರಾಯಸ್ವಾಮಿ 3 ಎಕರೆ ಜಮೀನಿನಲ್ಲಿ ಪ್ರಸ್ತುತ 850 ಕಟ್ಟೆ ಬಾಳೆ ಬೆಳೆದಿದ್ದಾರೆ. ತೆವರಿಯಲ್ಲಿ ಮೇವಿನ ಹುಲ್ಲು, ನುಗ್ಗೆ, 13 ತೇಗದ ಮರಗಳು, 4 ತೆಂಗಿನ ಮರಗಳು, ಕಿರಳಿ, ಸೀಬೆ, 4 ನಿಂಬೆ ಗಿಡಗಳು, ಸಪೋಟಾ, ಹಲಸು, ತೊಗರಿ, ಮೆಣಸಿನಕಾಯಿ, ಬೇವು, ಹೆಬ್ಬೇವು, 10 ಮಾವಿನ ಮರಗಳನ್ನು ಬೆಳೆಸಿದ್ದಾರೆ. ಇದ್ಯಾವುದಕ್ಕೂ ಔಷಧಿ ಸಿಂಪಡಿಸುತ್ತಿಲ್ಲ. ಬದಲಾಗಿ ಸಾವಯವ ವಿಧಾನದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಮನೆಯಲ್ಲಿ 2 ಹಸುಗಳನ್ನು ಸಾಕಿದ್ದಾರೆ. ಇವುಗಳಿಂದ ಸಿಗುವ ಸಗಣಿ, ಗಂಜಲದಿಂದ ಜೀವಾಮೃತ, ಗೋ ಕೃಪಾಮೃತ ತಯಾರಿಕೆ ಮಾಡಿ ಬಾಳೆಗೆ ನೀಡುತ್ತಿದ್ದಾರೆ. ಕಳೆಯನ್ನು ಕೊಳೆಸಿ ಗೊಬ್ಬರ ಮಾಡುತ್ತಿದ್ದಾರೆ. ತೆಂಗಿನ ಗರಿಗಳೂ ಸಹ ಇಲ್ಲಿ ಗೊಬ್ಬರವಾಗುತ್ತಿದೆ. ಮಣ್ಣು ಪರೀಕ್ಷೆ ಮಾಡಿಸಿ ಗುಣಮಟ್ಟ ತಿಳಿದುಕೊಂಡು ಅಗತ್ಯ ರೀತಿಯಲ್ಲಿ ಪೋಷಣೆ ಮಾಡುತ್ತಿದ್ದಾರೆ. ಅರಣ್ಯ ಕೃಷಿ ಮಾದರಿಯನ್ನು ಅನುಷ್ಟಾನಗೊಳಿಸಲು ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಮೀನು ಹಸಿರಿನಿಂದ ಕಂಗೊಳಿಸುತ್ತಿದೆ. ಬಾಳೆ ಗಿಡಗಳಿಂದ ಹಿಡಿದು ತೆವರಿ ಮೇಲೆ ಬೆಳೆದಿರುವ ಹುಲ್ಲಿನವರೆಗೂ ಸಮೃದ್ಧತೆ ಎದ್ದು ಕಾಣುತ್ತದೆ. ಮುಂದಿನ ದಿನಗಳಲ್ಲಿ ಅರಿಶಿಣ ಹಾಕಲು ಸಿದ್ದತೆ ಮಾಡಿಕೊಂಡಿದ್ದಾರೆ. ಪ್ರಯತ್ನದ ಲಿತಾಂಶ ಬದಲಾಗಬಹುದು. ಆದರೆ ಸ್ವಅನುಭವದ ಲ ಸಿಕ್ಕೇ ಸಿಗುತ್ತದೆ. ಸಾವಯವ ಪದ್ಧತಿಯಲ್ಲಿ ಈಗಾಗಲೇ ಅರಿಶಿಣ ಹಾಕಿ ಸಲು ಬಂದಿದೆ. ಬಾಳೆ, ಮುಸುಕಿನಜೋಳ ಬೆಳೆಯಲಾಗಿತ್ತು. ಸಾವಯವ ಪದ್ಧತಿಯಲ್ಲಿ ಅರಿಶಿಣ ಬೆಳೆದಾಗ ಮಳೆಯ ತೇವಾಂಶವಿದ್ದರೂ ಬೆಳೆ ಕೊಳೆಯಲಿಲ್ಲ. ರೋಗಬಾಧಿಸಲಿಲ್ಲ. ಪಂಚಗವ್ಯದ ಪ್ರಭಾವದಿಂಧ ಬಾಳೆ ಬೆಳೆಯಂತೂ ನಳನಳಿಸಿತ್ತು. ಕೆ.ಜಿಗಟ್ಟಲೆ ಗೊನೆಗಳು ಸಿಕ್ಕಿದ್ದವು. ಟೊಮೋಟೊ ಹಲವು ದಿನಗಳವರೆಗೆ ಇಟ್ಟಿದ್ದರೂ ಕೆಡದೆ ಗುಣಮಟ್ಟ ಉಳಿಸಿಕೊಂಡಿತ್ತು ಎಂದು ರೈತ ಚೆಲುವರಾಯಸ್ವಾಮಿ ಹೇಳುತ್ತಾರೆ.

‘ಜ್ಞಾನ’ ಹೆಚ್ಚಿಸಿದ ಕೃಷಿ ವಿಜ್ಞಾನ ಕೇಂದ್ರ: ರೈತ ಚೆಲುವರಾಯಸ್ವಾಮಿ ರಾಸಾಯನಿಕ ಕೃಷಿ ಮಾಡುವುದನ್ನು ಬಿಟ್ಟು ಸಾವಯವ ಕೃಷಿ ಮಾಡಲು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ(ಕೆವಿಕೆ) ಮಾರ್ಗದರ್ಶನ ಪ್ರಭಾವ ಬೀರಿದೆ. ಕೆವಿಕೆಯಲ್ಲಿ ನೀಡುವ ತರಬೇತಿಗಳಲ್ಲಿ ರೈತ ಚೆಲುವರಾಯಸ್ವಾಮಿ ಭಾಗಹಿಸಿದ್ದಾರೆ. ಇಲ್ಲಿ ಸಾವಯವ ಕೃಷಿ ಮಾಡುವ ವಿಧಾನಗಳನ್ನು ತಿಳಿದುಕೊಂಡಿದ್ದಾರೆ. ವಿಜ್ಞಾನಿಗಳ ಸಲಹೆ, ಸೂಚನೆಗಳನ್ನು ಕೃಷಿ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆವಿಕೆ ನೀಡಿರುವ ಸಾವಯವ ದ್ರಾವಣಗಳನ್ನು ಪಡೆದುಕೊಂಡು ಬೆಳೆಗಳಿಗೆ ಹಾಕುತ್ತಿದ್ದಾರೆ. ಸ್ವತಃ ತಾವೇ ದ್ರಾವಣಗಳನ್ನು ತಯಾರಿಸಿಕೊಳ್ಳುವುದನ್ನೂ ಕಲಿತುಕೊಂಡಿದ್ದಾರೆ. ಜರ್ಮನಿಯಲ್ಲಿ ಉದ್ಯೋಗ ತೊರೆದು ತಾಲೂಕಿನ ವಿ.ಸಿ.ಹೊಸೂರಿನಲ್ಲಿ ಕೃಷಿ ಮಾಡುತ್ತಿರುವ ಯುವ ರೈತ ಯೋಗೇಶ್ ಅವರ ತೋಟಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಎರೆಗೊಬ್ಬರವನ್ನು ಪಡೆದುಕೊಂಡು ಜಮೀನಿಗೆ ಹಾಕಿದ್ದಾರೆ. ರೈತ ಚೆಲುವರಾಯಸ್ವಾಮಿ ಮಗ ಸಿ.ನಿಶಾಂತ್ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಕಾಲೇಜು ರಜೆ ಇದ್ದಾಗ ಕೃಷಿಗೆ ಸಾಥ್ ನೀಡುತ್ತಿದ್ದಾನೆ. ಹಸುಗಳನ್ನು ಮಕ್ಕಳಂತೆ ಪಾಲನೆ ಮಾಡುತ್ತಿದ್ದಾನೆ.

ಮುಂದಿನ ಪೀಳಿಗೆಗೆ ಆರೋಗ್ಯಕರ ಮಣ್ಣನ್ನು ಉಳಿಸಲು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದು ಸೂಕ್ತ. 5ರಿಂದ 10 ವರ್ಷಗಳ ಬಳಿಕ ಜಮೀನಿನಲ್ಲಿ ಸಣ್ಣ ಪೈರು ನೆಟ್ಟರೂ ಚೆನ್ನಾಗಿ ಬೆಳೆಯುತ್ತದೆ. ಪ್ರಾರಂಭದಲ್ಲೇ ಇಳುವರಿ ಬಯಸುವ ಬದಲು ಭವಿಷ್ಯದಲ್ಲಿ ಸಾವಯವ ಕೃಷಿ ಕೈ ಹಿಡಿಯುತ್ತದೆ. ಚೆಲುವರಾಯಸ್ವಾಮಿ, ಸಾವಯವ ಕೃಷಿಕ, ಕಿರಗಸೂರು, ಚಾಮರಾಜನಗರ ರಾಸಾಯನಿಕ ಕೃಷಿಯಲ್ಲಿ ಗುಣಮಟ್ಟದ ಉತ್ಪನ್ನ ಪಡೆಯಲಾಗದು. ಸಾವಯವ ಕೃಷಿಯಡಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಲು ಬೇಕಾಗುವ ಸಾವಯವ ಪರಿಕರಗಳನ್ನು ಉತ್ಪಾದನೆ ಮಾಡಿಕೊಳ್ಳಬೇಕು. ಸಸ್ಯ ಸಂರಕ್ಷಣೆಗೆ ಕೆವಿಕೆಯಲ್ಲಿ ಸಿಗುವ ಜೈವಿಕ ಉತ್ಪನ್ನಗಳನ್ನು ಬಳಸಿ ಸುಸ್ಥಿರವಾಗಿ ಮಣ್ಣು ಮತ್ತು ನೀರನ್ನು ಸಂರಕ್ಷಿಸಿ ಗುಣಮಟ್ಟದ ಉತ್ಪಾದನೆ ಮಾಡಿ ಕೃಷಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಡಾ.ಯೋಗೇಶ್, ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net