ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದು

16
Published on

ಮೈಸೂರು: ವಿದ್ಯಾರ್ಥಿನಿಲಯದಲ್ಲಿದ್ದು ವ್ಯಾಸಂಗ ಮಾಡುವವರಿಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಕಿವಿಮಾತು ಹೇಳಿದರು.
ಬೋಗಾದಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ, ಮಹಿಳಾ ಆರೋಗ್ಯ, ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀವೆಲ್ಲರೂ ದೂರದ ಊರುಗಳಿಂದ ಇಲ್ಲಿಗೆ ಬಂದು ವ್ಯಾಸಂಗ ಮಾಡುತ್ತಿದ್ದೀರಿ. ನಿಮ್ಮ ತಂದೆ ತಾಯಂದಿರು ನಿಮಗಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ. ನೀವೆಲ್ಲರೂ ಚೆನ್ನಾಗಿ ಓದಬೇಕು. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿ, ಹೆಣ್ಣು ಈ ದೇಶದ ದೊಡ್ಡ ಶಕ್ತಿ. ಮುಟ್ಟು ಹೆಣ್ಣಿನ ಜೀವನದ ಜೈವಿಕ ಪ್ರಕ್ರಿಯೆ. ಈ ಬಗ್ಗೆ ಯಾರೂ ಮುಜುಗರಪಟ್ಟುಕೊಳ್ಳಬಾರದು ಎಂದರಲ್ಲದೆ, ಓದಿನತ್ತ ಹೆಚ್ಚು ಗಮನಹರಿಸುವ ಮೂಲಕ ದೇಶ ಕಟ್ಟುವ ಪ್ರಜೆಗಳಾಗಬೇಕು ಎಂದರು.
ವೈದ್ಯೆ ಡಾ. ಸುಮಾ ಮಾತನಾಡಿ, ಮುಟ್ಟಿನ ಕಪ್ ಬಳಕೆ, ಅದರಿಂದ ಆಗುವ ಅನುಕೂಲ ಹಾಗೂ ಪಿಸಿಒಡಿ ಸಮಸ್ಯೆ ಕುರಿತು ವಿವರವಾಗಿ ತಿಳಿಸಿದರು.
ಪ್ರಾಧ್ಯಾಪಕಿ ಪ್ರೊ.ರೇಖಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು, ಹಿರಿಯ ನಿಲಯಪಾಲಕರಾದ ಪವಿತ್ರ, ಸರೋಜ, ಅನುಷ, ತೇಜಸ್ವಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net