

ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಬಂಧನ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಿಂದ ವಿದೇಶಕ್ಕೆ ಹಾರಿ ಹೋಗಿರುವ ಪ್ರಜ್ವಲ್ ರೇವಣ್ಣ ಅವರಿಂದ ತೀವ್ರ ನೋವಿನಲ್ಲಿ ಇರುವ ಭವಾನಿ ರೇವಣ್ಣ ಅವರಿಗೆ ಸೋಮವಾರ ಜೆಡಿಎಸ್ ನಾಯಕರು ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಜೆಡಿಎಸ್ ನಾಯಕರಾದ ಕೆ.ಎಸ್.ಲಿಂಗೇಶ್, ಸಿ.ಎನ್.ಬಾಲಕೃಷ್ಣ, ಎಂ.ಎ.ನಾಗರಾಜ್ ಅವರು ಹೊಳೆನರಸೀಪುರ ಪಟ್ಟಣದಲ್ಲಿ ಇರುವ ಎಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಭವಾನಿ ರೇವಣ್ಣ ಅವರೊಂದಿಗೆ ಪ್ರಸ್ತುತ ವಿದ್ಯಮಾನದ ಬಗ್ಗೆ ಮಾತುಕತೆ ನಡೆಸಿ, ಅವರಿಗೆ ಧೈರ್ಯ ಹೇಳಿದರು.
ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ, ವೀಡಿಯೋದಲ್ಲಿರುವ ಸಂತ್ರಸ್ಥ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಬಂಧನ ವಿಚಾರದಿಂದ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೆ ಈ ಪ್ರಕರಣ ಹೊರ ಬರುತ್ತಿದ್ದಂತೆ ಭವಾನಿ ರೇವಣ್ಣ ಅವರು ಎಲ್ಲೂ ಹೋಗದೆ ಮನೆಯಲ್ಲೇ ಇದ್ದಾರೆ. ಹೀಗಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಜೆಡಿಎಸ್ ನಾಯಕರು ಮಾಡಿದ್ದಾರೆ.