ಭವಸಾಗರ ದಾಟಲು ಗುರು ನೌಕೆ ಅತ್ಯಗತ್ಯ

5blk9
 ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಕೆ)ಯ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸದ್ಗುರು ಶ್ರೀ ಸಚ್ಚಿದಾನಂದ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಡಾ.ಬಸವಲಿಂಗ ಅವಧೂತರು ಮಾತನಾಡಿದರು. ಶ್ರೀ ನಾಗಯ್ಯ ಸ್ವಾಮಿ, ಶ್ರೀ ಹಾವಯ್ಯ ಸ್ವಾಮಿ ಇದ್ದರು.
Published on

ಭಾಲ್ಕಿ: ಮಾನವ ಜನ್ಮ ಪಡೆದ ಮೇಲೆ ಈ ಭವ ಸಾಗರ ದಾಟಲು ಸದ್ಗುರುವೆಂಬ ನೌಕೆ ಅತ್ಯಗತ್ಯವಾಗಿದೆ ಎಂದು ತೆಲಂಗಾಣ ಜಹೀರಾಬಾದ್ ಮಲ್ಲಯ್ಯಗಿರಿಯ ಡಾ.ಬಸವಲಿಂಗ ಅವಧೂತರು ನುಡಿದರು.

ಬ್ಯಾಲಹಳ್ಳಿ(ಕೆ) ಗ್ರಾಮದ ಶ್ರೀ ಶಿವಾನಂದ ಕೈಲಾಸ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ೧೩ನೇ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಶ್ರೀ ಶಿವಾನಂದ ಸ್ವಾಮಿಗಳ ೩೨ನೇ, ಶ್ರೀ ಸಚ್ಚಿದಾನಂದ ಸ್ವಾಮಿಗಳ ೨೮ನೇ ಮತ್ತು ಶ್ರೀ ಗುರುಲಿಂಗ ಸ್ವಾಮಿಗಳ ೫ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರುಶಿಷ್ಯರ ಸಂಬಂಧ ಪ್ರೇಮಭರಿತವಾಗಿರಬೇಕು. ಸ್ಥಾನ, ಮಾನ, ಮರ್ಯಾದೆ ಇರುವ ಮನುಷ್ಯ ಸದ್ಗುರುವಿನ ದಾರಿಯಲ್ಲಿ ನಡೆಯುತ್ತಾನೆ. ಗುರುವಿನ ಸ್ಥಾನ ಮಹಿಮೆ ನಮ್ಮೆಲ್ಲರಿಗೂ ತಿಳಿದಿರಬೇಕು. ಗುರುಸ್ಥಾನದ ಮಹಿಮೆ ತಿಳಿಯಲು ನಮ್ಮ ಕಣ್ಣುಗಳು ಪವಿತ್ರವಾಗಿರಬೇಕು. ಕಣ್ಣುಗಳಲ್ಲಿ ಭಗವನಂತನ ಸ್ವರೂಪ, ಮಾತಿನಲ್ಲಿ ಭಗವಂತನ ಸ್ಮರಣೆ, ಕಿವಿಯಲ್ಲಿ ಭಗವಂತನ ಕೀರ್ತಿ ತುಂಬಿರಬೇಕು. ಅಂದಾಗ ಮಾತ್ರ ನಾವು ಪವಿತ್ರ ಮನುಷ್ಯರಾಗಲು ಸಾಧ್ಯ ಎಂದು ಹೇಳಿದರು.

ನೇತೃತ್ವ ವಹಿಸಿ ಮಾತನಾಡಿದ ಶಿವಾನಂದ ಕೈಲಾಸ ಆಶ್ರಮದ ಶ್ರೀ ನಾಗಯ್ಯ ಸ್ವಾಮಿ, ಗುರು ಕೃಪೆಯಂಬ ಸಂಪತ್ತು ಗಳಿಸುವುದೇ ಮಾನವ ಜನ್ಮದ ಸಾರ್ಥಕತೆ. ಪರಮಾತ್ಮನೇ ಪತಿಯಾಗಿದ್ದು, ಜೀವಾತ್ಮನೇ ಸತಿಯಾಗಿದ್ದಾನೆ. ನಮ್ಮ ಸರ್ವಸ್ವವನ್ನೂ ಆ ಪರಮಾತ್ಮನಿಗೆ ಒಪ್ಪಿಸಿದಾಗ ಅವನೇ ನಮ್ಮನ್ನೆಲ್ಲರನ್ನೂ ಕಾಯುವನು ಎಂದು ಹೇಳಿದರು.

ಸದ್ಗುರು ಶ್ರೀ ಸಿದ್ಧಾರೂಢರ ಷಟಸ್ಥಲ ಧ್ವಜಾರೋಹಣ, ಗ್ರಾಮದ ವಿವಿಧ ಬೀದಿಗಳಲ್ಲಿ ಶ್ರೀ ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ನಡೆಯಿತು. ಸಿದ್ದಾಪುರ ಹಿರೇಮಠದ ಶ್ರೀ ಹಾವಯ್ಯ ಸ್ವಾಮಿ, ಹೊಚಕನಳ್ಳಿಯ ಗುಂಡಪ್ಪ ಶರಣರು, ಮಳಚಾಪುರದ ಶರಣಯ್ಯ ಸ್ವಾಮಿ, ಯೋಗ ಗುರು ಸುರೇಶ ಮಾತನಾಡಿದರು.

ಶಿವಾನಂದ ಶಶಿಧರ ಪಾಟೀಲ್, ಬಾಬುರಾವ ಹಣಮಂತರಾವ, ಶಾಂತಮ್ಮ ಕಾಶಿನಾಥರಾವ, ಕಾವೇರಿ ಪಾಟೀಲ್, ಶಾರದಾಬಾಯಿ ಜಾಂತೆ, ಜಯರಾಜ ದಾಬಶೆಟ್ಟಿ ನಾವದಗಿ ಅವರಿಂದ ಮಹಾಪ್ರಸಾದ ಜರುಗಿತು.

ಶಾಮರಾಯ ಮಂದಕನಳ್ಳಿ, ಮಹಾಂತಯ್ಯ ಸ್ವಾಮಿ, ಓಂಶೆಟ್ಟಿ ಮರಕಲೆ, ಶರಣಪ್ಪ ಪಾಟೀಲ್​, ಶೋಭಾ ಇತರರಿದ್ದರು. ಜಯರಾಜ ದಾಬಶೆಟ್ಟಿ ಸ್ವಾಗತಿಸಿದರು. ಓಂಶೆಟ್ಟಿ ಮರಕಲೆ ನಿರೂಪಣೆ ಮಾಡಿದರು. ಸಿದ್ಧಾರೂಢ ವಂದಿಸಿದರು.

ಮಠದ ಪೀಠಾಧಿಪತಿಗಳು ಯಾರೇ ಇದ್ದರೂ ಅವರು ಸದ್ಗುರುಗಳೇ ಆಗಿದ್ದಾರೆ. ಪೀಠಕ್ಕೆ ಮಹತ್ವವಿದೆ, ಅವರ ಕೃಪಾಶಿರ್ವಾದಿಂದ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು.

| ಶ್ರೀ ಡಾ.ಬಸವಲಿಂಗ ಅವಧೂತರು ಮಲ್ಲಯ್ಯಗಿರಿ ಜಹೀರಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net