ಭವರೋಗ ನಿವಾರಕ ಪ್ರಸನ್ನ ಸೋಮೇಶ್ವರ : ಮುಮ್ಮಡಿ ಕೆಂಪೇಗೌಡರು ನಿರ್ಮಿಸಿದ ದೇವಾಲಯ

55
Published on

ಎಂ.ಎಸ್.ಸಿದ್ದಲಿಂಗೇಶ್ವರ್ ಮಾಗಡಿ

ಪವಾಡಗಳಿಂದಲೇ ಹೆಸರಾಗಿರುವ ಧಾರ್ಮಿಕ ಕ್ಷೇತ್ರ, ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಂಡರೆ ಕೆಲವೇ ದಿನಗಳಲ್ಲಿ ಬಗೆಹರಿಯುತ್ತದೆ ಎಂಬ ನಂಬಿಕೆ, ಭಕ್ತರ ಪಾಲಿಗೆ ಭವರೋಗ ನಿವಾರಕನಾಗಿರುವ ಕ್ಷೇತ್ರವೇ ಮಾಗಡಿಯ ಪ್ರಸನ್ನ ಸೋಮೇಶ್ವರ ದೇವಾಲಯ.

ಮುಮ್ಮಡಿ ಕೆಂಪೇಗೌಡರ ತಾಯಿ ಕೆಂಪನಂಜಮ್ಮ ವಯಸ್ಸಿನ ಕಾರಣದಿಂದಾಗಿ ಕಾಶಿಗೆ ತೆರಳಲು ಸಾಧ್ಯವಾಗದ ಕಾರಣ ಕೆಂಪೇಗೌಡರು ಕಾಶಿಯಿಂದಲೇ ಸಾಲಿಗ್ರಾಮದ ಲಿಂಗ ತಂದು 1512ರಲ್ಲಿ ದೇವಾಲಯ ನಿರ್ಮಿಸಿ ಲಿಂಗ ಪ್ರತಿಷ್ಠಾಪಿಸಿದರು ಎನ್ನುವುದು ಇತಿಹಾಸ. ದೇಗುಲ ಅದ್ಭುತ ಶಿಲ್ಪಕಲೆ ಹೊಂದಿದ್ದು, ಇಲ್ಲಿನ ಸೌಂದರ್ಯ ಎಂತಹವರನ್ನೂ ಶಾಂತಚಿತ್ತರನ್ನಾಗಿಸುವಂತಿದೆ. ವಿಜಯನಗರ ಸಾವ್ರಾಜ್ಯದ ಗಡಿಯಾಗಿದ್ದ ಮಹಾಗಡಿಯೇ ವಾಗಡಿ. ಕ್ರಿ.ಶ. 1512ರಲ್ಲಿ ಇಮ್ಮಡಿ ಕೆಂಪೇಗೌಡರು ಹನುವಾಪುರದ ಶಿಲ್ಪಿ ಮುನಿಯಾ ಭೋವಿ ಮತ್ತು ತಂಡದವರಿಂದ ಸ್ಥಳೀಯವಾಗಿ ದೊರೆಯುತ್ತಿದ್ದ ಕೆಂಪುಮಿಶ್ರಿತ ಕಲ್ಲು ಬಳಸಿ ಈ ದೇವಾಲಯ ನಿರ್ಮಿಸಿದರು ಎಂದು ಗರ್ಭಗುಡಿಯ ಶಾಸನದಿಂದ ತಿಳಿಯುತ್ತದೆ. ಗಗನಧಾರ್ಯರ ಪ್ರೇರಣೆಯಿಂದ ಇಮ್ಮಡಿ ಕೆಂಪೇಗೌಡರು ಲಿಂಗ ಧಾರಣೆ ಮಾಡಿಸಿಕೊಂಡು ಮಾಗಡಿ ತಾಲೂಕಿನಲ್ಲಿ 66 ವಿರಕ್ತ ಮಠಗಳನ್ನು, ಗುಡಿ, ಗೋಪುರಗಳನ್ನು ನಿರ್ಮಿಸಿರುವ ಬಗ್ಗೆ ‘ನಿರಂಜನ ವಂಶ ರತ್ನಾಕರ’ ಕೃತಿಯಲ್ಲಿ ಉಲ್ಲೇಖವಿದೆ.

ಕಂಚಿನ ಶಬ್ದದ ಕಂಬ: ಕೆಂಪೇಗೌಡರು ನ್ಯಾಯ ತೀರ್ಮಾನ ನೀಡುತ್ತಿದ್ದ ದೇವಾಲಯದ ದೇವ ಮೂಲೆಯಲ್ಲಿರುವ ಒಂದು ಕಂಬಕ್ಕೆ ನಾಣ್ಯದಿಂದ ಹೊಡೆದರೆ ಕಂಚಿನ ಶಬ್ದ ಬರುತ್ತದೆ. ದೇವಾಲಯದ ಬಲಭಾಗದಲ್ಲಿ ನೃತ್ಯ ಮಂಟಪವಿದ್ದು ಇಲ್ಲಿರುವ ಎರಡು ಕಂಬಗಳಲ್ಲಿ ಕೆತ್ತನೆಗಳಿದ್ದು, ಅವು ಕೆಂಪೇಗೌಡರದ್ದು ಎನ್ನಲಾಗುತ್ತದೆ.

ಒರಟು ಕಲ್ಲಿನಲ್ಲೂ ಶಿಲ್ಪಿಯ ಚತುರತೆ: ದೇವಾಲಯದ ಪೌಳಿಯೊಳಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಮ್ಮಡಿ ಕೆಂಪೇಗೌಡರ ಹಜಾರಗಳಿವೆ. ಒಳ ಆವರಣದಲ್ಲಿ ಸತ್ಯನಾರಾಯಣಸ್ವಾಮಿ, ಭ್ರಮರಾಂಬಿಕೆ ದೇಗುಲಗಳಿವೆ. ಹಂಪಿಯಲ್ಲಿನ ವಿರೂಪಾಕ್ಷ ದೇಗುಲದಲ್ಲಿರುವಂತೆಯೇ ನೃತ್ಯ ಮಂಟಪವಿದೆ. ಪೌಳಿ ಗೋಡೆಯ ನಾಲ್ಕು ದಿಕ್ಕಿನಲ್ಲಿ ಮತ್ತು ಹಜಾರದ ಮೇಲೆ ಚಿತ್ರಾಲಂಕೃತ ಗೋಪುರಗಳಿವೆ. ಒರಟು ಕಲ್ಲಿನಲ್ಲೂ ಗಿರಿಜಾ ಕಲ್ಯಾಣದ ಚಿತ್ರಗಳನ್ನು ಕೆತ್ತಲಾಗಿದೆ.

ಪ್ರಸನ್ನ ಸೋಮೇಶ್ವರ ದೇವಾಲಯ ಬಂಡೆಯ ಮೇಲೆ ನಿರ್ವಾಣಗೊಂಡಿದೆ. ದೇವಾಲಯದ ದಕ್ಷಿಣ ದ್ವಾರ ಶಿಥಿಲಗೊಂಡಿದ್ದ ರಾಯಗೋಪುರವನ್ನು ಪ್ರಾಚ್ಯವಸ್ತು ಇಲಾಖೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿದೆ. ದೇವಾಲಯದ ಮುಂದಿನ ರಾಜಗೋಪುರವನ್ನು ಜೀರ್ಣೋದ್ಧಾರ ಮಾಡಲು ಚಿಂತಿಸಲಾಗಿದೆ. ದೇವಾಲಯದ ನೈಋತ್ಯ ದಿಕ್ಕಿನಲ್ಲಿ ಬೆಟ್ಟದ ಮೇಲೆ ಇರುವ ಕೆಂಪೇಗೌಡರ ಕಾವಲು ಗೋಪುರ ಮತ್ತು ಶಿಖರ ನಂದಿ ಶಿಥಿಲಾವಸ್ಥೆಯಲ್ಲಿವೆ. ಬೆಟ್ಟದ ಕೆಳಗೆ ಇದ್ದ ಕಲ್ಯಾಣಿ ಪುನರುಜ್ಜೀವನಗೊಂಡಿದ್ದು ತೆಪ್ಪೋತ್ಸವ ನಡೆಯುತ್ತದೆ.

ಮಾಘ ಶುದ್ಧ ಸಪ್ತಮಿಯಂದು ರಥೋತ್ಸವ: ಪ್ರತಿವರ್ಷ ಮಾಘ ಶುದ್ಧ ಸಪ್ತಮಿಯಂದು 10 ದಿನ ಜಾತ್ರೆ, ರಥೋತ್ಸವ ನಡೆಯುತ್ತದೆ. ರಥೋತ್ಸವ ಮುನ್ನಾದಿನ ದೇವಾಲಯದ ಒಳಗೆ ನಡೆಯುವ ಗಿರಿಜಾ ಕಲ್ಯಾಣೋತ್ಸವದಲ್ಲಿ ದೇವರಿಗೆ ಅರ್ಪಿಸುವ ಜೀರಿಗೆ ಬೆಲ್ಲವನ್ನು ಮದುವೆ ಆಗದವರು ತಲೆ ಮೇಲೆ ಹಾಕಿಕೊಂಡರೆ ಶೀಘ್ರ ವಿವಾಹವಾಗುತ್ತದೆ. ರುದ್ರಾಭಿಷೇಕ ಮಾಡಿಸಿದರೆ ಅಪಮೃತ್ಯು, ಕಾಳಸರ್ಪ ದೋಷ, ಅಗ್ನಿಕಂಟಕ, ಜಲಕಂಟಕ ದೋಷಗಳು ನಿವಾರಣೆಯಾಗಲಿವೆ, ಮಕ್ಕಳಾಗದವರು, ವ್ಯಾಪಾರ, ಅಭಿವೃದ್ಧಿ ಬಯಸುವರು ಭ್ರಮರಾಂಬಿಕಾ ದೇವಿಗೆ ಮಡಿಲಕ್ಕಿ ತುಂಬಿದರೆ ಇಷ್ಟಾರ್ಥ ನೆರವೇರಲಿದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಚುನಾವಣೆ ಸ್ಪರ್ಧಿಗಳು ನಾಮಪತ್ರ ಸಲ್ಲಿಸುವ ಮುನ್ನ ಮೊದಲು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವುದು. ಪ್ರತಿ ಅಮಾವಾಸ್ಯೆಯಂದು ವಿವಿಧ ಹೋಮಗಳು, ಕಾರ್ತಿಕ ಅವಾವಾಸ್ಯೆಯಂದು ಲಕ್ಷ ದಿಪೋತ್ಸವ ಸೇರಿ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ನಡೆಯುತ್ತದೆ.

ದೇವಾಲಯ ಅಭಿವೃದ್ಧಿ ಕಾಣುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಭಕ್ತರು ಭೇಟಿ ನೀಡುತ್ತಾರೆ. ಭಕ್ತರ ವಸತಿಗೆ ಅತಿಥಿಗೃಹದ ಅಗತ್ಯವಿದೆ. ಕಿರಣ್ ದೀಕ್ಷಿತ್, ಅರ್ಚಕ ಪ್ರಸನ್ನ ಸೋಮೇಶ್ವರ ಭಕ್ತರ ಕಷ್ಟ ಬಗೆಹರಿಸುವ, ಭವರೋಗ ನಿವಾರಿಸುವ ಶಕ್ತಿ ಹೊಂದಿದ್ದು, ದೇವಾಲಯಕ್ಕೆ ಕಾವಲುಗಾರರನ್ನು ನೇಮಿಸಬೇಕು. ಪುರುಷೋತ್ತಮ್ ಆರ್.ಪಟೇಲ್, ದಾನಿ ಪ್ರಸನ್ನ ಸೋಮೇಶ್ವರ ದೇವಾಲಯ ತನ್ನದೇ ಆದ ಐತಿಹಾಸಿಕ ಪ್ರಸಿದ್ಧಿ ಹಾಗೂ ಅಪಾರ ಭಕ್ತ ಸಮೂಹ ಹೊಂದಿದೆ. ಈ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಡಾ.ಕೆ.ಪಿ.ಮಹದೇವಶಾಸ್ತ್ರಿ ಸಮಾಜಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net