

ಪಾಂಡವಪುರ: ಕುರುಬ ಸಮಾಜದ ಆಶಯಕ್ಕೆ ತಕ್ಕಂತೆ ಪಟ್ಟಣ ವ್ಯಾಪ್ತಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಕನಕದಾಸರ 565 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ತಾವು ನಡೆದು ಬಂದು ಹಾದಿಯನ್ನು ಕೀರ್ತನೆ ರೂಪದಲ್ಲಿ ಹೇಳಿದ್ದಾರೆ. ಕನಕದಾಸರ ಕೀರ್ತನೆಗಳ ಆಳವನ್ನು ಅರ್ಥ ಮಾಡಿಕೊಂಡು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಕೇವಲ ಜಯಂತಿಗಳ ದಿನದಂದು ಮಹನೀಯರನ್ನು ಸ್ಮರಣೆ ಮಾಡಿದರೆ ಸಾಲದು. ಸಮ ಸಮಾಜ ಮತ್ತು ಸಮಾನತೆಯನ್ನು ಮೈಗೂಡಿಸಿಕೊಳ್ಳುವಂತೆ ಕೀರ್ತನೆಗಳಲ್ಲಿ ತಿಳಿ ಹೇಳಲಾಗಿದೆ ಎಂದರು.
ಮಹನೀಯರ ಆಶಯಗಳನ್ನು ಕೇವಲ ಮಾತು ಮತ್ತು ಭಾಷಣಗಳಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದ ನಡೆಯಲ್ಲೂ ಅದರ ಸಾರ ಇರಬೇಕು. ಶ್ರದ್ಧೆ ಭಕ್ತಿ ಇದ್ದರೆ ದೇವರು ಪ್ರತ್ಯಕ್ಷನಾಗುತ್ತಾನೆ ಎಂಬುದಕ್ಕೆ ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿರುವ ಕನಕ ಕಿಡಿಯೇ ಸಾಕ್ಷಿ. ಕನಕದಾಸರ ಭಕ್ತಿಗೆ ದೇವರು ದಿಕ್ಕನ್ನು ಬದಲಾಯಿಸಿ ದರ್ಶನ ನೀಡಿದ್ದಾರೆ. ನಾವೆಲ್ಲರೂ ಪ್ರತಿಯೊಬ್ಬ ಮಹನೀಯರ ಆದರ್ಶನಗಳನ್ನು ಮೈಗೂಡಿಸಿಕೊಳ್ಳುವ ಕಡೆ ಗಮನಹರಿಸಿಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕನಕ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು ಮತ್ತು ಅಗತ್ಯವಿರುವ ನಿವೇಶನವನ್ನು ತಕ್ಷಣ ಮಂಜೂರು ಮಾಡಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹಾಗೂ ಸಮಾಜದ ಮುಖಂಡರಾದ ಮಂಗಳಾ ನವೀನ್ ಶಾಸಕರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವೈಯಕ್ತಿಕ ಹಣದಲ್ಲಿ ಸಮವಸ್ತ್ರ ನೀಡಿದರು.
ತಹಸೀಲ್ದಾರ್ ಎಸ್.ಸಂತೋಷ್, ಶಿರಸ್ತೇದಾರ್ ಮೋಹನ್, ತಾಪಂ ಇಒ ಲೋಕೇಶ್‌ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸಮಾಜದ ಮುಖಂಡ ಹುಚ್ಚೇಗೌಡ ಇತರರು ಇದ್ದರು.