ಭರ್ತಿಯಾದ ಕಾರಂಜಾ ಜಲಾಶಯ

Karnja
Published on

ಬೀದರ್: ಕಳೆದ ತಿಂಗಳು ಹಾಗೂ ಇದೀಗ ಜಿಲ್ಲೆ ಮತ್ತು ನೆರೆಯ ತೆಲಂಗಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯಕ್ಕೆ ಅಕ ಪ್ರಮಾಣದ ನೀರು ಬರುತ್ತಿದ್ದು, ಮತ್ತೊಮ್ಮೆ ಭರ್ತಿಯಾಗಿದೆ.
ಸತತ ಮೂರು ವರ್ಷ ಜಲಾಶಯ ತುಂಬಿತ್ತು. ಈಗ ಮತ್ತೆ ಕಾರಂಜಾ ಒಡಲು ಭರ್ತಿಯಾಗಿದೆ. ಬೀದರ್ ಸೇರಿ ಕಾರಂಜಾ ಉಗಮ ಸ್ಥಾನವಾದ ತೆಲಂಗಾಣದ ಮೇದಕ್ ಜಿಲ್ಲೆ ಕೋಹಿರ್ ಸುತ್ತಲಿನ ಪ್ರದೇಶದಲ್ಲೂ ಮಳೆ ಆಗುತ್ತಿದ್ದರಿಂದ ಬುಧವಾರ ಜಲಾಶಯದ ನೀರಿನ ಮಟ್ಟ 7.512 ಟಿಎಂಸಿಗೆ ತಲುಪಿದ್ದು, ಒಟ್ಟು ಸಾಮಥ್ರ್ಯ 7.691 ಟಿಎಂಸಿ ಇದೆ.
ಒಳಹರಿವು ಮುಂದುವರಿದಿದ್ದರಿಂದ ಜಲಾಶಯದ ಎರಡು ಗೇಟ್ ತೆರೆದು 5367 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ 5367 ಕ್ಯೂಸೆಕ್ ಒಳಹರಿವಿದೆ. ಮಳೆ ಹೆಚ್ಚಾದರೆ ಯಾವುದೇ ಸಂದರ್ಭದಲ್ಲಿ ಎಲ್ಲ ಗೇಟ್ ತೆರೆದು ನೀರು ಬಿಡುವುದಾಗಿ ಅಕಾರಿಗಳು ತಿಳಿಸಿದ್ದಾರೆ.
ಕಾರಂಜಾ 782 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು, ಇದರಲ್ಲಿ ಬೀದರ್ ಜಿಲ್ಲೆ 565 ಚದರ ಕಿ.ಮೀ. ಮತ್ತು ತೆಲಂಗಾಣ 217 ಚದರ ಕಿ.ಮೀ. ವ್ಯಾಪ್ತಿಯಿದೆ. 1997-98, 2008-09, 2010-11ರಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿತ್ತು. ನಂತರ 2016, 2020, 2021 ಮತ್ತು 2022ರಲ್ಲಿ ಪೂರ್ಣ ಭರ್ತಿ ಯಾಗಿತ್ತು. ಈಗ ಮತ್ತೆ ಮಳೆ ಅಬ್ಬರ ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.
ಕಾರಂಜಾಗೆ ನೀರು ಬಂದಿರುವುದು ಬೀದರ್ ನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಪಟ್ಟಣ ಹಾಗೂ ಕೆಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದೆ. ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ 125 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.75 ಭರ್ತಿಯಾದರೆ, ಉಳಿದವು ಮೈದುಂಬಿಕೊಳ್ಳುವ ಹಂತಕ್ಕೆ ಬಂದಿವೆ.
ಅರ್ಧ ತುಂಬಿದ ಚುಳುಕಿನಾಲಾ: ವ್ಯಾಪಕ ಮಳೆಯಿಂದ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ಮತ್ತು ಮುಲ್ಲಾಮಾರಿ ಜಲಾಶಯಕ್ಕೂ ಸಾಕಷ್ಟು ನೀರು ಬಂದಿದೆ. ಮುಸ್ತಾಪುರ ಹತ್ತಿರದ ಚುಳಕಿನಾಲಾ ಜಲಾಶಯ 0.938 ಟಿಎಂಸಿ ಸಾಮಥ್ರ್ಯ ಹೊಂದಿದ್ದು, 0.535 ಟಿಎಂಸಿ ಸಂಗ್ರಹವಾಗಿದೆ. ಖೇರ್ಡಾ(ಬಿ) ಸಮೀಪದ ಮುಲ್ಲಾಮಾರಿ ಮೇಲ್ದಂಡೆ ಜಲಾಶಯ ಸಂಪೂರ್ಣ ಭರ್ತಿ ಯಾಗಿದ್ದು, ನೀರು ಹೊರಬಿಡಲಾಗುತ್ತಿದೆ. 0.749 ಟಿಎಂಸಿ ಸಾಮಥ್ರ್ಯದ ಜಲಾಶಯ ಭರ್ತಿಯಾದ ಕಾರಣ ಕೆಳಗಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಗೇಟ್ ರಹಿತ ಜಲಾಶಯ ಇದಾಗಿದ್ದರಿಂದ ಒಳಹರಿವಿನಷ್ಟು ನೀರು ಹೊರಹೋಗುತ್ತಿದೆ. ಇಲ್ಲಿಂದ ಹೋಗುವ ನೀರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಕೆಳದಂಡೆ ಜಲಾಶಯ್ಕ ಸೇರುತ್ತದೆ. ಕಟ್ಟಿತೂಗಾಂವ್-ಕಣಜಿಗೆ ಸಂಪರ್ಕಿಸುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net