

ಬೀದರ್: ಕಳೆದ ತಿಂಗಳು ಹಾಗೂ ಇದೀಗ ಜಿಲ್ಲೆ ಮತ್ತು ನೆರೆಯ ತೆಲಂಗಾಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಬರುತ್ತಿದ್ದು, ಮತ್ತೊಮ್ಮೆ ಭರ್ತಿಯಾಗಿದೆ.
ಸತತ ಎರಡು ವರ್ಷ ಜಲಾಶಯ ತುಂಬಿತ್ತು. ಈಗ ಮತ್ತೆ ಕಾರಂಜಾ ಒಡಲು ಭರ್ತಿ ಯಾಗಿದೆ. ಬೀದರ್ ಸೇರಿ ಕಾರಂಜಾ ಉಗಮ ಸ್ಥಾನವಾದ ತೆಲಂಗಾಣದ ಮೇದಕ್ ಜಿಲ್ಲೆ ಕೋಹಿರ್ ಸುತ್ತಲಿನ ಪ್ರದೇಶದಲ್ಲೂ ಮಳೆ ಆಗುತ್ತಿದ್ದರಿಂದ ಭಾನುವಾರ ಜಲಾಶಯದ ನೀರಿನ ಮಟ್ಟ 7.190 ಟಿಎಂಸಿಗೆ ತಲುಪಿದ್ದು, ಒಟ್ಟು ಸಾಮಥ್ರ್ಯ 7.691 ಟಿಎಂಸಿ ಇದೆ.
ಒಳಹರಿವು ಮುಂದುವರಿದಿದ್ದರಿಂದ ಜಲಾಶಯದ ಮೂರು ಗೇಟ್ ತೆರೆದು 3500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ 3697 ಕ್ಯೂಸೆಕ್ ಒಳಹರಿವು ಇದೆ. ಮಳೆ ಹೆಚ್ಚಾದರೆ ಯಾವುದೇ ಸಂದರ್ಭದಲ್ಲಿ ಎಲ್ಲ ಗೇಟ್ ತೆರೆದು ನೀರು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಕಾರಂಜಾ 782 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು, ಇದರಲ್ಲಿ ಬೀದರ್ ಜಿಲ್ಲೆ 565 ಚದರ ಕಿ.ಮೀ. ಮತ್ತು ತೆಲಂಗಾಣ 217 ಚದರ ಕಿ.ಮೀ. ವ್ಯಾಪ್ತಿಯಿದೆ. 1997-98, 2008-09, 2010-11ರಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿತ್ತು. ನಂತರ 2016, 2020 ಮತ್ತು 2021ರಲ್ಲಿ ಪೂರ್ಣ ಭರ್ತಿ ಯಾಗಿತ್ತು. ಈಗ ಮತ್ತೆ ಮಳೆ ಅಬ್ಬರ ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.
ಕಾರಂಜಾಗೆ ನೀರು ಬಂದಿರುವುದು ಬೀದರ್ ನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಪಟ್ಟಣ ಹಾಗೂ ಕೆಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದೆ. ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ 124 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ.75 ಭರ್ತಿಯಾದರೆ, ಉಳಿದವು ಮೈದುಂಬಿಕೊಳ್ಳುವ ಹಂತಕ್ಕೆ ಬಂದಿವೆ.
ಭರ್ತಿಯತ್ತ ಚುಳುಕಿನಾಲಾ: ವ್ಯಾಪಕ ಮಳೆಯಿಂದ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ಮತ್ತು ಮುಲ್ಲಾಮರಿ ಜಲಾಶಯಕ್ಕೂ ಸಾಕಷ್ಟು ನೀರು ಬಂದಿದೆ. ಮುಸ್ತಾಪುರ ಹತ್ತಿರದ ಚುಳಕಿನಾಲಾಕ್ಕೆ 191 ಕ್ಯೂಸೆಕ್ ಒಳಹರಿವಿದೆ. ಜಲಾಶಯ 0.938 ಟಿಎಂಸಿ ಸಾಮಥ್ರ್ಯ ಹೊಂದಿದ್ದು, 0.770 ಟಿಎಂಸಿ ಸಂಗ್ರಹವಾಗಿದೆ. 207 ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಮುಲ್ಲಾಮರಿ ಮೇಲ್ದಂಡೆ ಜಲಾಶಯ ಸಂಪೂರ್ಣ ಭರ್ತಿ ಯಾಗಿದ್ದು, ನೀರು ಹೊರಗಡೆ ಬಿಡಲಾಗುತ್ತಿದೆ. 0.749 ಟಿಎಂಸಿ ಸಾಮಥ್ರ್ಯದ ಜಲಾಶಯ ಭರ್ತಿ ಯಾದ ಕಾರಣ ಕೆಳಗಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಜಲಾಶಯಕ್ಕೆ 465 ಕ್ಯೂಸೆಕ್ ಒಳಹರಿವಿದೆ. ಗೇಟ್ ರಹಿತ ಜಲಾಶಯ ಇದಾಗಿದ್ದರಿಂದ ಒಳಹರಿವಿನಷ್ಟು ನೀರು ಹೊರಹೋಗುತ್ತಿದೆ. ಇಲ್ಲಿಂದ ಹೋಗುವ ನೀರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಕೆಳದಂಡೆ ಜಲಾಶಯಕ್ಕೆ ಸೇರುತ್ತದೆ.